NEWSನಮ್ಮರಾಜ್ಯರಾಜಕೀಯ

ಬಸನಗೌಡ ಪಾಟೀಲ್ ಯತ್ನಾಳ್ ಶಾಸಕ ಸ್ಥಾನ ಭದ್ರ: ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್‌ಗೆ ಭಾರಿ ಮುಖಭಂಗ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಶಾಸಕ ಸ್ಥಾನದ ಮೇಲಿದ್ದ ಕಾನೂನು ಸಮರದ ತೂಗುಗತ್ತಿ ಜಾರಿಬೀಳುವ ಮೂಲಕ ಅಪಾಯದಿಂದ ಪಾರು ಮಾಡಿದೆ.

ಅಂದರೆ ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಯತ್ನಾಳ್ ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಚುನಾವಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಭಾರಿ ಮುಖಭಂಗವಾಗಿದೆ.

ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಕ್ರಮ ಎಸಗಿದ್ದಾರೆ, ಹಣ ಹಂಚಿದ್ದಾರೆ ಮತ್ತು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದರು.

ಇನ್ನು ಈ ಅರ್ಜಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ್ದ ಹೈಕೋರ್ಟ್, 2025ರ ಜುಲೈ 18 ರಂದು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅರ್ಜಿಯನ್ನು ವಜಾ ಮಾಡಿತ್ತು. ಅಲ್ಲದೆ, ಸುಳ್ಳು ಆರೋಪ ಮಾಡಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಮುಶ್ರೀಫ್ ಅವರಿಗೆ ದಂಡವನ್ನೂ ವಿಧಿಸಿತ್ತು. ಇದರಿಂದ ಬೆಚ್ಚಿದ ಮುಶ್ರೀಫ್ ಸುಪ್ರೀಂ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್ ತೀರ್ಪು: ಹೈಕೋರ್ಟ್ ನೀಡಿದ ಈ ತೀರ್ಪನ್ನು ಪ್ರಶ್ನಿಸಿ ಹಮೀದ್ ಮುಶ್ರೀಫ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು (ಫೆ.14.2026) ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು ಅಲ್ಲದೆ ಈ ಅರ್ಜಿಯಲ್ಲಿ ಯಾವುದೇ ಗಟ್ಟಿಯಾದ ಅಂಶಗಳಿಲ್ಲದ ಕಾರಣ ವಜಾಗೊಳಿಸಿ ಆದೇಶಿಸಿದೆ. ಇದರಿಂದಾಗಿ ಯತ್ನಾಳ್ ಅವರ ಶಾಸಕ ಸ್ಥಾನ ಈಗ ಸಂಪೂರ್ಣ ಭದ್ರವಾಗಿದೆ.

‘ಸತ್ಯಮೇವ ಜಯತೆ’ ಅಂದ ಯತ್ನಾಳ್: ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್, “ಸತ್ಯಮೇವ ಜಯತೆ” ಎಂದು ಬರೆದುಕೊಂಡಿದ್ದಾರೆ. “ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ನ್ಯಾಯಾಲಯದ ಮೇಲೆ ನನಗೆ ನಂಬಿಕೆಯಿತ್ತು, ಇಂದು ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.

ಇನ್ನು ಇಂತಹ ಗೊಡ್ಡು ಬೆದರಿಕೆಗಳಿಗೆ ಮತ್ತು ಸುಳ್ಳು ಕೇಸುಗಳಿಗೆ ನಾನು ಎಂದಿಗೂ ಹೆದರುವುದಿಲ್ಲ” ಎಂದು ಅವರು ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ತನ್ನ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ. ಈ ತೀರ್ಪು ಯತ್ನಾಳ್ ಬೆಂಬಲಿಗರಲ್ಲಿ ಹರ್ಷ ತಂದಿದ್ದು, ವಿಜಯಪುರದಲ್ಲಿ ಸಂಭ್ರಮಾಚರಣೆ ಮನೆಮಾಡಿದೆ.

Megha
the authorMegha

Leave a Reply

error: Content is protected !!