ಬೆಂಗಳೂರು: 2023ರ ಮೇ ಜೂನ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದು, ಬಸ್ ಯಾತ್ರೆ, ಪ್ರಚಾರ, ತಳ ಹಂತದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕಾರ್ಯದಲ್ಲಿ ನಿರತವಾಗಿದೆ. ಅದರ ಬೆನ್ನಲ್ಲೆ ಮೀಸಲಾತಿ ಕುರಿತ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸುವಾಗ ಎಚ್ಚರಿಕೆ ವಹಿಸಿ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ.
ನೋಡಿ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಕೇಳಿಬರುತ್ತಿರುವ ಪಂಚಮಸಾಲಿ ಲಿಂಗಾಯತ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಕುರಿತು ಪ್ರತಿಕ್ರಿಯಿಸುವಾಗ ಜಾಗರೂಕರಾಗಿರಿ ಎಂದು ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.
ಆಡಳಿತದಲ್ಲಿ ಭ್ರಷ್ಟಾಚಾರ, 40% ಕಮಿಷನ್ ಆರೋಪ, ನೇಮಕಾತಿ ಹಗರಣ, ಪ್ರವಾಹ ನಿರ್ವಹಣೆ ಮತ್ತು ಆಡಳಿತ ವೈಫಲ್ಯದಂತಹ ವಿಷಯಗಳಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಹೋರಟ ಮತ್ತು ಅಭಿಯಾನಗಳನ್ನು ತೀವ್ರಗೊಳಿಸುವಂತೆ ದೆಹಲಿಯ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ.
ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರಕ್ಕೆ ಮನ್ನಣೆ ನೀಡಬಹುದು ಎಂದು ನಾವು ರಾಜ್ಯ ನಾಯಕರಿಗೆ ಹೇಳಿದ್ದೇವೆ. ಆದರೆ ಪಂಚಮಸಾಲಿ ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬರು ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸುವಾಗ ಪಕ್ಷದ ನಾಯಕರು ಬಹಳ ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರನ್ನು ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ಕೋಟಾವನ್ನು ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸಿತು. ಇದರ ನಂತರ, ರಾಜ್ಯದ ಹಲವಾರು ಇತರ ಸಮುದಾಯಗಳು ಮೀಸಲಾತಿ ನೀಡುವಂತೆ ಮತ್ತು ಮೀಸಲಾತಿ ಕೋಟಾ ಹೆಚ್ಚಿಸುವಂತೆ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿವೆ.
ಪ್ರಸ್ತುತ ಶೇ.5ರ ಕೋಟಾದೊಂದಿಗೆ ಪ್ರವರ್ಗ 3ಬಿ ಅಡಿಯಲ್ಲಿ ಬರುವ ಪಂಚಮಸಾಲಿ ಲಿಂಗಾಯತರು ಶೇ.15ರ ಕೋಟಾದಲ್ಲಿ ಪಾಲು ಪಡೆಯುವಂತೆ 2ಎ ವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಇತ್ತ ಒಕ್ಕಲಿಗರು ಮೀಸಲಾತಿಯನ್ನು ಈಗಿರುವ ಶೇ.4ರಿಂದ ಶೇ.12ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಒಬಿಸಿಗಳಾಗಿರುವ ಕುರುಬ ಜನಾಂಗವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಪಂಚಮಸಾಲಿ ಮತ್ತು ಇತರ ಸಮುದಾಯಗಳ ಬೇಡಿಕೆಗಳ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಮಾತನಾಡಿರುವ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, “ನ್ಯಾಯಮೂರ್ತಿ ಸುಭಾಷ್ ಆದಿ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿ ಮತ್ತು ಸರ್ಕಾರವು ಈ ವಿಷಯದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಿ. ನಾವು ಈಗ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದಿದ್ದಾರೆ.
ಮಾರ್ಚ್ 2021 ರಲ್ಲಿ, ರಾಜ್ಯದ ಬಿಜೆಪಿ ಸರ್ಕಾರವು ಕರ್ನಾಟಕದ ಮೀಸಲಾತಿಯಲ್ಲಿ ಬದಲಾವಣೆಗಳನ್ನು ತರುವ ಎಲ್ಲಾ ಮೀಸಲಾತಿ ಬೇಡಿಕೆಗಳನ್ನು ಪರಿಶೀಲಿಸಲು ಮಾಜಿ ಹೈಕೋರ್ಟ್ ನ್ಯಾಯಾಧೀಶರಾದ ಸುಭಾಷ್ ಬಿ ಆದಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ಸಮಿತಿಯು ಇನ್ನೂ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ.