ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಶಕ್ತಿ ಯೋಜನೆಗೆ ಇನ್ನಷ್ಟು ಶಕ್ತಿನೀಡುವ ನಿಟ್ಟಿನಲ್ಲಿ ನಾರಿಯರ ವಿಷಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸಿಬ್ಬಂಗಳಿಗೆ ತಾಕೀತು ಮಾಡಲಾಗಿದೆ.
ಶಕ್ತಿಯೋಜನೆಯಡಿ ರಾಜ್ಯಾದ್ಯಂತ ಸಾರಿಗೆ ಬಸ್ಗಳಲ್ಲಿ ಮಹಿಳೆಯರು ಈಗಾಗಲೇ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದರ ಯಶಸ್ವಿ ಅನುಷ್ಠಾನಕ್ಕೆ ನಾಲ್ಕೂ ನಿಗಮಗಳ ಚಾಲನಾ ಸಿಬ್ಬಂದಿಗಳ ಪರಿಶ್ರಮವು ಹೆಚ್ಚಿನ ಮಟ್ಟದಲ್ಲಿದೆ. ಆದರೆ ಕೆಲ ಅಹಿತಕರ ಘಟನೆಗಳಿಂದ ಶಕ್ತಿ ಯೋಜನೆ ಬಗ್ಗೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡುತ್ತಿವೆ.
ಹೀಗಾಗಿ ಸಿಬ್ಬಂದಿಗಳು ಮಹಿಳಾ ಪ್ರಯಾಣಿಕರ ಹಿತ ಕಾಪಾಡಿಕೊಳ್ಳಬೇಕಾಗಿದೆ. ಬಸ್ ನಿಲ್ಲಿಸದೇ ಇರುವುದು ಮತ್ತಿತರ ದೂರುಗಳು ಬರಬಾರದು. ಒಂದು ವೇಳೆ ಬಂದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.
ಚಾಲನಾ ಸಿಬ್ಬಂದಿಗಳು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು ಹಾಗೂ ಈ ಬಗ್ಗೆ ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ, ದೂರುಗಳು ಬಂದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸೂಚನೆ ನೀಡಿದೆ.
ಮಹಿಳೆಯರು ಇರುವ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದೇ ಇರುವುದು, ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಬಗ್ಗೆ ಅಪಹಾಸ್ಯ ಮಾಡುವುದು ಹಾಗೂ ಇನ್ನಿತರ ರೀತಿಯಲ್ಲಿ ಮಹಿಳೆಯರೊಂದಿಗೆ ಆಗೌರವದಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿರುವುದನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ.
ಮಹಿಳೆಯರಿಗೆ ವಿತರಿಸುವ ಟಿಕೆಟ್ ಮೊತ್ತವನ್ನು ಸಾರಿಗೆ ಅದಾಯವೆಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮದ ಚಾಲಕ ಮತ್ತು ನಿರ್ವಾಹಕರು ಮಹಿಳಾ ಪ್ರಯಾಣಿಕರೊಂದಿಗೆ ಯಾವುದೇ ರೀತಿಯಲ್ಲಿ ಅಗೌರವದಿಂದ ನಡೆದುಕೊಳ್ಳುವ ಪ್ರಕರಣಗಳು ವರದಿಯಾದಲ್ಲಿ, ಸಂಬಂಧಪಟ್ಟ ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ತಿಳಿಸಲಾಗಿದೆ.
ಇನ್ನು ಮಹಿಳೆಯರು ಉಚಿತವಾಗಿ ಬಸ್ನಲ್ಲೀ ಪ್ರಯಾಣಿಸುತ್ತಿದ್ದರು. ಅವರಿಂದ ನಿಗಮಗಳಿಗೆ ಆದಾಯ ಬರುತ್ತಿದೆ. ಅಂದರೆ ನಿಗಮಗಳ ಬಸ್ಗಳು ಅವರನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತಿಲ್ಲ. ಬದಲಿಗೆ ಸರ್ಕಾರದಿಂದ ಅವರು ಪ್ರಯಾಣಿಸಿದವರೆಗೂ ಸಂಸ್ಥೆಗೆ ಹಣ ಬರುತ್ತಿದೆ. ಹೀಗಾಗಿ ನೌಕರರು ಸೌಜನ್ಯದಿಂದ ನಡೆದುಕೊಳ್ಳಬೇಖು ಎಂದು ಸೂಚನೆ ನೀಡಲಾಗಿದೆ.