ಬಳ್ಳಾರಿ: ದಾಖಲೆ ಇಲ್ಲದ 5.60 ಕೋಟಿ ಹಣ, ಅಪಾರ ಚಿನ್ನ, ಬೆಳ್ಳಿ ಆಭರಣ ಪೊಲೀಸರ ವಶಕ್ಕೆ
ಬಳ್ಳಾರಿ: ಲೋಕಸಭಾ ಚುನಾವಣೆಯ ಮತಯಾಚನೆ ಬಿರುಸಾಗಿರುವಾಗಲೇ ಗಣಿನಾಡು ಬಳ್ಳಾರಿಯಲ್ಲಿ ದಾಖಲೆ ಇಲ್ಲದ ಕೋಟ್ಯಂತರ ಹಣವನ್ನು ಸೀಜ್ ಮಾಡಲಾಗಿದೆ.
ಹೌದು! ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸರು ನಡೆಸಿದ ಈ ಭರ್ಜರಿ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಈ ವೇಳೆ ಬರೋಬ್ಬರಿ 5.60 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಹಣದ ಮೂಲಕ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಹೌದು! ಎಲೆಕ್ಷನ್‌ಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ತೆರೆದು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂಬಳಿ ಬಜಾರ್‌ನಲ್ಲಿರುವ ಹೇಮಾ ಜ್ಯೂವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಹಣ, ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 5.60 ಕೋಟಿ ರೂ. ನಗದು, 3 ಕೆಜಿ ಬಂಗಾರ 103 ಕೆಜಿ ಬೆಳ್ಳಿ ಆಭರಣ, 21 ಕೆಜಿ ಕಚ್ಚಾ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಜಪ್ತಿ ಮಾಡಿದ ನಗದು ಹವಾಲಾಕ್ಕೆ ಸಂಬಂಧಿಸಿದ ಹಣ ಎನ್ನಲಾಗಿದ್ದು, ಪ್ರಕರಣ ಸಂಬಂಧ ಆರೋಪಿ ನರೇಶ್ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಳ್ಳಾರಿ ಡಿವೈಎಸ್ಪಿ, ಬ್ರೂಸ್ ಪೇಟೆ ಸಿಪಿಐ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಸ್ಥಳಕ್ಕೆ ಖುದ್ದಾಗಿ ಎಸ್ಪಿ ರಂಜಿತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.