ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಹರಿಸಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುತ್ತಿರುವ ಕಾರಣ ಇದೇ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಸಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ವಿವಿಧ ಕನ್ನಡಪರ, ರೈತಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಚರ್ಚಿಸಿ ಸಭೆಯ ತೀರ್ಮಾನವನ್ನು ಪ್ರಕಟಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರರು ತಮಿಳುನಾಡಿಗೆ ನೀರು ಹರಿಸುವ ಸಂಬಂಧ ನೀಡಿರುವ ತೀರ್ಪಿಗೆ ಸಭೆಯಲ್ಲಿ ಎಲ್ಲ ಸಂಘಟನೆಗಳ ಮುಖಂಡರು ಖಂಡನೆ ವ್ಯಕ್ತಪಡಿಸಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸರ್ಕಾರವೇ ಈಗಾಗಲೇ ಬರ ಘೋಷಣೆ ಮಾಡಿದೆ. ರೈತರು ಬೆಳೆದ ಬೆಳೆಗಳಿಗೆ ನೀರು ಇರಲಿ, ರಾಜ್ಯದ ಜನರು ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ಇದೆ. ಹೀಗಿದ್ದದರೂ ನಿರು ಹರಿಸುವುದು ಮುಂದುವರಿದರೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಗಂಡಾಂತರ ಬರುತ್ತದೆ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬಳಸುವ ನೀರಿನ ಪ್ರಮಾಣದ ಅರ್ಧದಷ್ಟು ಭಾಗದ ನೀರನ್ನು ಬೆಂಗಳೂರು ಜನರು ಕುಡಿಯುವ ನೀರಿಗಾಗಿ ಬಳಸುತ್ತಿದ್ದಾರೆ. ಆದರೂ ಬೆಂಗಳೂರು ಜನರು ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿರುವ ಸಂಬಂಧ ರೈತರು ಕಳೆದ 45 ದಿನಗಳಿಂದ ಅವಿರತವಾಗಿ ಹೋರಾಟ ನಡೆಸುತ್ತಿದ್ದರೂ ಈ ಜನರು ಮಾತ್ರ ಸುಮ್ಮನಿದ್ದಾರೆ ಎಂದು ಕಿಡಿಕಾರಿದರು.
ವಚನಭ್ರಷ್ಟ ಸರ್ಕಾರವಾಗಿದ್ದು, ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎನ್ನುತ್ತದೆ ಆದರೆ ರಾತ್ರೋರಾತ್ರಿ ಕದ್ದುಮುಚ್ಚಿ ನೀರು ಬಿಟ್ಟು ರಾಜ್ಯದ ಜನರ ಮರಣ ಶಾಸನ ಬರೆಯುತ್ತಿದೆ ಎಂದು ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ಕರ್ನಾಟಕದಲ್ಲಿ ಈಗಾಗಲೇ ಮಾನ್ಸೂನ್ ಮುಕ್ತಾಯದ ಹಂತಕ್ಕೆ ಬಂದಿದೆ. ತಮಿಳುನಾಡಿನಲ್ಲಿ ಈಗ ನಾರ್ಥ್ ಈಸ್ಟ್ ಮಾನ್ಸೂನ್ ಆರಂಭವಾಗುತ್ತಿದೆ. ತಮಿಳುನಾಡಿನವರು ತಮ್ಮ ಬೆಳೆ ರಕ್ಷಣೆಗಾಗಿ ನಮ್ಮ ಕರ್ನಾಟಕದ ನೀರನ್ನು ಕೇಳುತ್ತಿದ್ದಾರೆ. ಆದರೆ ನಮಗೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಕಾಣುತ್ತಿದೆ ಎಂದರು.
ಸುಪ್ರೀಂಕೋರ್ಟ್ ಸಹ ಕುಡಿಯುವ ನೀರಿಗೆ ಮೊದಲ ಆದ್ಯತೆಯನ್ನು ನೀಡಬೇಕು ಹೇಳುತ್ತದೆ.ಈ ಹಿನ್ನೆಲೆಯಲ್ಲಿ ಕಾವೇರಿ ನೀರನ್ನು ಉಳಿಸಬೇಕಾದುದ್ದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಆದೇಶ ಉಲ್ಲಂಘನೆ ಮಾಡಬಾರದೆಂದು ತಮಿಳುನಾಡಿಗೆ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದರು.
ಈ ಸಂಬಂಧ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇದೇ ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಭೆಯಲ್ಲಿ ಭಾಗಿಗಳಾಗಿದ್ದ 150ಕ್ಕೂ ಹೆಚ್ಚು ಸಂಘಟನೆಗಳ ಅಭಿಪ್ರಾಯವನ್ನು ಕೇಳಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಬಂದ್ ಕೇವಲ ಸಂಘ ಸಂಸ್ಥೆಗಳ ಬಂದ್ ಅಲ್ಲ ಎಲ್ಲ ಜನ ಸಾಮಾನ್ಯರ ಬಂದಾಗಿದೆ. ಕಾವೇರಿ ನೀರು ಕುಡಿಯುವ ಪ್ರತಿಯೊಬ್ಬರೂ ಈ ಬಂದ್ ನಲ್ಲಿ ಭಾಗವಹಿಸುವ ಮೂಲಕ ಬಂದ್ ಯಶಸ್ವಿಯಾಗಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸೊಣ ಎಂದು ಕರೆ ನೀಡಿದರು.
ಈ ಬಂದ್ ಗೆ ಎಲ್ಲ ಸಂಘಟನೆಗಳ ಜೊತೆಗೆ ಸಿನಿಮಾ ಉದ್ಯಮ ಆಟೋ ರಿಕ್ಷಾ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು, ಐಟಿ-ಬಿಟಿ ಕಂಪನಿಯವರು, ವಿದ್ಯಾಸಂಸ್ಥೆಯವರು, ಅಪಾರ್ಟ್ಮೆಂಟ್ ಸಂಘ ಸಂಸ್ಥೆಗಳು ಖಾಸಗಿ ಕಾರ್ಖಾನೆಯವರು, ಕೈಗಾರಿಕೆಗಳು ವರ್ತಕರು ಹೋಟೆಲ್ ಉದ್ಯಮಿದಾರರು ಅಂಗಡಿ ಮಾಲೀಕರುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಬೇಕೆಂದು ಕೋರಿದರು.
ಸಭೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ 150ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು.