ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ಮತ ಪ್ರಚಾರ ಮಾಡಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಕಾಂಗ್ರೆಸ್ ಬೆಂಬಲಿಗ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೇಪಾಳ್ಯದಲ್ಲಿ ಈ ಘಟನೆ ಡೆದಿದ್ದು, ಡಾ. ಮಂಜುನಾಥ್ ಪರವಾಗಿ ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಪ್ರಚಾರ ಮಾಡಿದ್ದಾರೆ.
ಅದಕ್ಕೆ ಕಾಂಗ್ರೆಸ್ ಬೆಂಬಲಿತ ವ್ಯಕ್ತಿ ಬೋರೇಗೌಡ ಹಾಗೂ ಬೆಂಬಲಿಗರು ಸೇರಿ ಮಾತನಾಡಬೇಕು ಎಂದು ಮಂಜುನಾಥ್ ಅವರನ್ನು ಕರೆಯಿಸಿಕೊಂಡು, ಅಂಚೇಪಾಳ್ಯದ ಬಳಿ ಮಂಜುನಾಥ್ ಬರುತ್ತಿದ್ದಂತೆ ಬೋರೇಗೌಡ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಚಾಕು ಇರಿಯುತ್ತಿದ್ದಂತೆ ತಕ್ಷಣ ಜೀವ ಉಳಿಸಿಕೊಳ್ಳಲು ಕೆಳಕ್ಕೆ ಬಗ್ಗಿದ್ದರಿಂದ ಚಾಕು ತಲೆಗೆ ಚುಚ್ಚಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಮಂಜುನಾಥ್ನನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.