ಕಾಲ್‌ಗರ್ಲ್ ಬೇಕಿದ್ದರೆ ಕರೆ ಮಾಡಿ: ಪತ್ನಿ ನಂಬರ್ ಹಾಕಿ ಫೇಸ್ಬುಕ್ನಲ್ಲಿ ಪತಿ ಪೋಸ್ಟ್!
ಬೆಂಗಳೂರು: ಪತ್ನಿಯಿಂದ ದೂರಾಗಿದ್ದ ವ್ಯಕ್ತಿಯೊಬ್ಬ ಪತ್ನಿಯ ಫೋಟೋ ಹಾಗೂ ಮೊಬೈಲ್ ನಂಬರ್ ಹಾಕಿ, ಕಾಲ್‌ಗರ್ಲ್ ಬೇಕಿದ್ದರೆ ಕರೆ ಮಾಡಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ಆಘಾತಕಾರಿ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸತ್ಯನಾರಾಯಣ ರೆಡ್ಡಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ವಿವರ: ದಾಂಪತ್ಯ ಕಲಹವೇ ಈ ಘಟನೆಗೆ ಮುಖ್ಯ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸತ್ಯನಾರಾಯಣ ರೆಡ್ಡಿ ಮತ್ತು ಆತನ ಪತ್ನಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಇದರಿಂದ ಬೇಸತ್ತ ಪತ್ನಿ ಆತನಿಂದ ದೂರಾಗಿದ್ದಾರೆ.
ಆದರೆ, 2019ರಲ್ಲಿ ಮದುವೆಯಾಗಿದ್ದ ಈ ದಂಪತಿ ಒಂದು ವರ್ಷ ಹಿಂದೆಯೇ ಬೇರೆ ಬೇರೆಯಾಗಿದ್ದರೂ ಈತ ಕಿರುಕುಳ ಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ. ಒಂದು ವರ್ಷದಿಂದಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಕಾರಣ ಆಕೆ ಈತನಿಂದ ದೂರಾಗಿದ್ದಳು.
ಆಕೆ ನನ್ನಿಂದ ದೂರಾಗಿದ್ದಾಳೆ ಎಂಬು ಕಾರಣಕ್ಕೆ ಸಿಟ್ಟಿಗೆದ್ದಿದ್ದ ಆರೋಪಿ ಪತ್ನಿ ವಿರುದ್ಧ ಸೇಡು ತೀರಿಸಲು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಇನ್ನು ಆರೋಪಿ ಸತ್ಯನಾರಾಯಣ ರೆಡ್ಡಿ ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿ ಅದರಲ್ಲಿ ಪತ್ನಿಯ ದೂರವಾಣಿ ಸಂಖ್ಯೆ, ಫೋಟೋ ಮತ್ತು ಜತೆಗೆ ಆಕೆಯ ಸಹೋದರನ ಮೊಬೈಲ್ ಸಂಖ್ಯೆ ಕೂಡ ಪೋಸ್ಟ್ ಮಾಡಿದ್ದ. ಅಲ್ಲದೇ ಕಾಲ್‌ಗರ್ಲ್ ಬೇಕಿದ್ದಲ್ಲಿ ಸಂಪರ್ಕಿಸಿ ಎಂದು ಹಾಕಿದ್ದ.
ಇದರಿಂದಾಗಿ ಸಂತ್ರಸ್ತೆ ಮತ್ತು ಆಕೆಯ ಸಹೋದರನಿಗೆ ಸಿಕ್ಕಾಪಟ್ಟೆ ಫೋನ್ ಕರೆಗಳು ಬರಲು ಆರಂಭವಾಗಿದ್ದವು. ಇದರಿಂದ ಬೇಸತ್ತ ಸಂತ್ರಸ್ತೆ ಮತ್ತು ಆಕೆಯ ಸಹೋದರ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.