
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳ ಮೇಲೆ ಜಾಹೀರಾತುಗಳ ಪ್ರಕಟಿಸಿ ತನ್ನ ಆದಾಯ ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಇದರಿಂದ ಪ್ರಯಾಣಿಕರು ವಿಶೇಷವಾಗಿ ವೃದ್ಧರು ತಮ್ಮ ಬಸ್ಗಳನ್ನು ತ್ವರಿತವಾಗಿ ಗುರುತಿಸಲಾಗದ ಪರಿಸ್ಥಿತಿ ಉಂಟಾಗಿದೆ.
ಈ ಮೊದಲು, ಬಸ್ಗಳನ್ನು ಗುರುತಿಸುವುದು ನಮಗೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಭಾರಿ ಕಷ್ಟವಾಗುತ್ತಿದೆ. ಏಕೆಂದರೆ ಇಡೀ ಬಸ್ ಹೊರಮೈ ಬರಿ ಜಾಹೀರಾತುಗಳಿಂದ ತುಂಬಿದ್ದು ಇದು ಬಿಎಂಟಿಸಿ ಬಸ್ಸೋ ಅಥವಾ ಬೇರೆಯದೋ ಎಂದು ಗೊತ್ತಾಗುವುದಕ್ಕೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುವ ಕತ್ತರಿಗುಪ್ಪೆಯ ನಿವಾಸಿ ಅಂಬೂಜಾಕ್ಷಿ ತಿಳಿಸಿದ್ದಾರೆ.
ನಾವು ಈ ಹಿಂದೆ ಬಸ್ ಎಲ್ಲಿಗೆ ಪ್ರಯಾಣಿಸುತ್ತಿದೆ ಮತ್ತು ಯಾವಾಗ ಇಳಿಯಲು ಸಿದ್ಧರಾಗಿರಬೇಕು ಎಂದು ಸುಲಭವಾಗಿ ತಿಳಿಯಬಹುದಿತ್ತು. ಆದರೆ, ಇತ್ತೀಚೆಗೆ ಬಸ್ ಪಕ್ಕದ ಫಲಕಗಳಲ್ಲಿಯೂ ಜಾಹೀರಾತುಗಳನ್ನು ಹಾಕುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದ ನಾವು ಎಷ್ಟೋ ಬಾರಿ ಬಂದ ಬಸ್ಅನ್ನು ಮಿಸ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅದರಲ್ಲೂ ಸಾರಿಗೆ ಬಸ್ಅನ್ನು ನಿಯಮಿತವಾಗಿ ಬಳಸುವ ಅನೇಕ ಹಿರಿಯ ನಾಗರಿಕರು, ತಮ್ಮ ಸ್ಥಳಗಳಿಗೆ ಹೋಗುವ ಬಸ್ಗಳನ್ನು ಗುರುತಿಸಲು ಕಷ್ಟ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಬಿಎಂಟಿಸಿ ಆದಾಯ ಕಡಿಮೆಯಾಗಿದೆ. ಹೀಗಾಗಿ ಜಾಹೀರಾತು ಆದಾಯ ಮೂಲಗಳಲ್ಲಿ ಒಂದಾಗಿದ್ದು, ಬಸ್ಗಳ ಹಿಂದಿನ ಫಲಕದಲ್ಲಿ ಜಾಹೀರಾತುಗಳನ್ನು ಅನುಮತಿಸಲಾಗುತ್ತಿದೆ. ಬಸ್ಸಿನ ಸುತ್ತಲೂ ಸಂಪೂರ್ಣ ಜಾಹೀರಾತು ಹಾಕುವುದು ಹೆಚ್ಚಿನ ಆದಾಯ ನೀಡುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ನಗರದಾದ್ಯಂತ ಈ ಬಸ್ಗಳ ಸಂಚಾರವಿದೆ. ಪ್ರತಿಯೊಂದು ಬಸ್ಗಳ ಮೇಲೆ ಸಂಪೂರ್ಣ ಜಾಹೀರಾತುಗಳನ್ನು ಹಾಕಲಾಗಿದೆ. ಈದರಿಂದ ಆದಾಯ ಉತ್ಪಾದನೆ ಅಗತ್ಯವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಅಂತಾರಾಷ್ಟ್ರೀಯ ಖ್ಯಾತಿಯ ನಗರವಾದ ಬೆಂಗಳೂರಿನಲ್ಲಿ ಸಾರಿಗೆ ಬಸ್ಸಿನ ಸುತ್ತಲೂ ಜಾಹೀರಾತು ಹಾಕುವುದು ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಮಾರ್ಗದಲ್ಲಿ ಅಲ್ಲದೆ, ಬೇರೆ ಜಾಹೀರಾತುಗಳ ಮೂಲಕವೂ ಬಿಎಂಟಿಸಿ ಆದಾಯ ಗಳಿಸಬಹುದು ಎಂದು ಶಿಕ್ಷಣ ಇಲಾಖೆಯ ಉದ್ಯೋಗಿ ಮಂಜುನಾಥ್ ಎಂಬುವವರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.
ಬಸ್ಗಳ ಪಕ್ಕದ ಫಲಕಗಳಲ್ಲಿನ ಜಾಹೀರಾತುಗಳು ‘ಪಾರದರ್ಶಕ’ವಾಗಿದ್ದರೆ, ಉಳಿದವು ವಾಲ್ ಪೇಪರ್ ರೀತಿಯಲ್ಲಿ ಮಾಡಲ್ಪಟ್ಟಿವೆ. ಈ ಜಾಹೀರಾತುಗಳು ಯಾವುದೇ ರೀತಿಯಲ್ಲಿ ಬಸ್ ಸೂಚನಾ ಫಲಕಗಳು, ಮುಂಭಾಗ ಮತ್ತು ಹಿಂಭಾಗದ ದೀಪಗಳು, ಡಿಪೋ ಸಂಖ್ಯೆಗಳು, ವಾಹನ ನೋಂದಣಿ ಸಂಖ್ಯೆ ಮತ್ತು ಇತರವುಗಳನ್ನು ನಿರ್ಬಂಧಿಸಬಾರದು ಎಂಬುದು ಷರತ್ತುಗಳಾಗಿವೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
