ರಾಯಚೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಎಂಟ್ರಿ ನೀಡಿದ್ದು, ಜನರನ್ನು ಬಿಸಿಲ ಬೇಗೆಯಿಂದ ಕೊಂಚ ರಕ್ಷಿಸಿದ್ದಾನೆ. ಆದರೆ ಬಿಸಿಲ ನಾಡು ರಾಯಚೂರಲ್ಲಿ ಸದ್ಯ ಮಳೆಯ ಸೂಚನೆ ಇಲ್ಲ. ಬಿಸಿಲಿನ ತಾಪದ ತೀವ್ರತೆ ಹೆಚ್ಚಾಗಿದ್ದು ಬಿಎಂಟಿಸಿ ನೌಕರರ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಎರಡು ಪ್ರತ್ಯೇಕ ಘಟನೆಗಳಲ್ಲಿ ಮಲ್ಲಯ್ಯ (45) ಹಾಗೂ ಆಂಜನೇಯ ಎಂಬುವರು ಅಸುನೀಗಿದ್ದಾರೆ. ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಎಂಬುವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಲ್ಲಯ್ಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ನಿವಾಸಿ.
ಮಲ್ಲಯ್ಯ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಮಧ್ಯಾಹ್ನದ ವೇಳೆ ಮಸ್ಕಿ ಪಟ್ಟಣಕ್ಕೆ ದಿನಸಿ ಪದರ್ಥಗಳನ್ನು ತರಲು ಬಂದಾಗ ದುರಂತ ನಡೆದಿದೆ. ರಸ್ತೆಯಲ್ಲಿ ಕುಸಿದು ಬಿದ್ದ ತಕ್ಷಣ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ.
ಇತ್ತ, ರಾಯಚೂರು ತಾಲೂಕಿನ ಜಾಲಿಬೆಂಚಿಯಲ್ಲಿ ಅಂಜನೇಯ (45) ಎಂಬುವರು ಮೃತಪಟ್ಟಿದ್ದಾರೆ. ಹೊಲದಿಂದ ಕೆಲಸ ಮುಗಿಸಿ ಮನೆಗೆ ಬರುವಾಗ ಬಿಸಿಲಿನ ಝಳ ತಾಳಲಾರದೇ ಸುಸ್ತಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಅಂದ್ಹಾಗೆ ನಿತ್ಯ ರಾಯಚೂರಲ್ಲಿ 44 ರಿಂದ 46°ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಅನಾವಶ್ಯಕವಾಗಿ ಓಡಾಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.