ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ಪ್ರಾಮಾಣಿಕತೆ ಮೆರೆಯುತ್ತಲೇ ಇರುತ್ತಾರೆ. ಅದಕ್ಕೆ ನೂರಾರು ನಿದರ್ಶನಗಳು ಕೂಡ ಇವೆ.
ಅವುಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನ ಸಂಖ್ಯೆ KA 57 3297 ಮಾರ್ಗ ಸಂಖ್ಯೆ 305 D/7 ರಲ್ಲಿ ಪ್ರಯಾಣಿಕರೊಬ್ಬರು ತಮ್ಮ ಲ್ಯಾಪ್‌ಟಾಪ್, ಪರ್ಸ್, ಮೊಬೈಲ್ ಮತ್ತು ಬೆಲೆಬಾಳುವ ವಸ್ತುಗಳನ್ನು ವಾಹನದಲ್ಲಿ ಮರೆತು ಬಿಟ್ಟು ಹೋಗಿದ್ದರು.
ಈ ವೇಳೆ ಅದನ್ನು ಗಮನಿಸಿದ ಬಿಎಂಟಿಸಿ ಮಹಿಳಾ ಕಂಡಕ್ಟರ್ ಉಮಾ (ಬಿಲ್ಲೆ ಸಂಖ್ಯೆ11897) ಅವರು ವಾರಸುದಾರರ ಪತ್ತೆಗೆ ಪ್ರಯತ್ನಿಸಿದರು. ಆದರೆ, ಯಾರು ಸಿಗದಿದ್ದಾಗ ಅದನ್ನು ಬಿಎಂಟಿಸಿ ಘಟಕ- 2 ರ ವ್ಯವಸ್ಥಾಪಕರಿಗೆ ಒಪ್ಪಿಸಿದರು.
ಘಟಕ ವ್ಯವಸ್ಥಾಪಕ ವಿಶ್ವೇಶ ಅವರು ವಸ್ತುಗಳನ್ನು ಕಳೆದುಕೊಂಡಿದ್ದ ಪ್ರಯಾಣಿಕರನ್ನು ಸಂಪರ್ಕಿಸಿ ಘಟಕಕ್ಕೆ ಕರೆಸಿ ಅವರ ವಸ್ತುಗಳನ್ನು ಹಸ್ತಾಂತರ ಮಾಡಿದರು.
ತಾವು ಕಳೆದುಕೊಂಡಿದ್ದ ವಸ್ತುಗಳು ಮರಳಿ ಸಿಕ್ಕಿದ್ದರಿಂದ ಹರ್ಷಗೊಂಡ ಪ್ರಯಾಣಿಕರು ಕಂಡಕ್ಟರ್ ಉಮಾ ಅವರ ಪ್ರಾಮಾಣಿಕತೆಗೆ ಧನ್ಯವಾದ ತಿಳಿಸಿ, ಸಂಸ್ಥೆ ನೌಕರರ ಪ್ರಾಮಾಣಿಕತೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಘಟಕದ ರಂಗನಾಥ್, ಪ್ರವೀಣ್ ಮತ್ತಿತರರು ಇದ್ದರು.