ಆರೋಪಿ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮುದ್ದೋಡಿ ಅವರಿಗೆ ಎರಡೆರಡು ಅಗ್ನಿ ಪರೀಕ್ಷೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 17 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು, ಬಿಎಂಟಿಸಿಯ ಹಿಂದಿನ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್ ಸೇರಿದಂತೆ 7 ಮಂದಿ ವಿರುದ್ಧ ದಾಖಲಿಸಿಕೊಂಡಿದ್ದಾರೆ.
ಈಗಾಗಲೇ ಬಿಎಂಟಿಸಿ ಶಾಂತಿನಗರ ಕಚೇರಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಈ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್, ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮುದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ. ಮಮತಾ, ಮೇಲ್ವಿಚಾರಕಿ ಟಿ. ಅನಿತಾ, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ, ಸಹಾಯಕ ಸಂಚಾರ ನಿರೀಕ್ಷಕಿ ಗುಣಶೀಲಾ, ಕಿರಿಯ ಸಹಾಯಕ ಕೆ. ವೆಂಕಟೇಶ್ ಎಂಬುವರ ವಿರುದ್ಧ ಎರಡು ಎಫ್ಐಆರ್ಗಳು ದಾಖಲಾಗಿದ್ದು, ಆ ಎಫ್ಐಆರ್ಗಳಿಗೆ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ.
ಮತ್ತೆ ಮೊನ್ನೆ ಈ ಏಳೂ ಮಂದಿ ಅಧಿಕಾರಿಗಳ ವಿರುದ್ಧ 17 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಮೂರನೇ ಎಫ್ಐಆರ್ ದಾಖಲಾಗಿದ್ದು, ಈ ಸಂಬಂಧ ಜಾಮೀನು ಪಡೆಯಲು ಪ್ರಮುಖ ಎರಡನೇ ಆರೋಪಿ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮುದ್ದೋಡಿ ಅವರು ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದು, ಮಂಗಳವಾರ 67ನೇ ಕೋರ್ಟ್ ಹಾಲ್ನಲ್ಲಿ ವಿಚಾರಣೆ ನಡೆದು, ತೀರ್ಪನ್ನು ಅ.13ರಕ್ಕೆ ಕಾಯ್ದಿರಿಸಲಾಗಿದೆ.
ಅಂದರೆ ನಾಳೆ (ಅ.13) ಮೂರನೇ ಎಫ್ಐಆರ್ ಸಂಬಂಧ ಶ್ಯಾಮಲಾ ಎಸ್. ಮುದ್ದೋಡಿ ಅವರಿಗೆ ಜಾಮೀನು ಮುಂಜೂರಾಗುವುದೋ ಇಲ್ಲವೋ ಎಂಬುವುದರ ಆದೇಶ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಹೊರಬೀಳಲಿದೆ.
ಈ ನಡುವೆಯೇ ಹಿಂದೆ ದಾಖಲಾಗಿರುವ ಎರಡು ಎಫ್ಐಆರ್ (182/2023 ಮತ್ತು 183/2023)ಗಳಿಗೆ ತಡೆ ನೀಡುವಂತೆ ಶ್ಯಾಮಲಾ ಎಸ್. ಮುದ್ದೋಡಿ ಅವರು ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರ ಮೂಲಕ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯ ವಿಚಾರಣೆಯೂ ಅ.13ರಂದೇ ಅಂದರೆ ನಾಳೆಯೇ ಹೈಕೋರ್ಟ್ನ 20ನೇ ಹಾಲ್ನ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಏಕ ಸದಸ್ಯ ಪೀಠದಲ್ಲಿ ನಡೆಯಲಿದೆ.
ಒಂದು ವೇಳೆ ಹೈ ಕೋರ್ಟ್ನಲ್ಲಿ ಈ ಎರಡು ಎಫ್ಐಆರ್ಗಳಿಗೆ ತಡೆ ನೀಡಿದರೆ ಶ್ಯಾಮಲಾ ಎಸ್. ಮುದ್ದೋಡಿ ಅವರಿಗೆ ದೊಡ್ಡ ರಿಲೀಫ್ ಸಿಗಲಿದೆ. ಅಲ್ಲದೆ ಸಿಟಿ ಸಿವಿಲ್ ಕೋರ್ಟ್ನಲ್ಲೂ ನಾಳೆ ಜಾಮೀನು ಮಂಜೂರಾದರೆ ಮುಂದೆ ಈ ಮೂರನೇ ಎಫ್ಐಆರ್ಗೂ ತಡೆ ನೀಡುವಂತೆ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.
ಒಂದು ವೇಳೆ ಸಿಟಿ ಸಿವಿಲ್ ಕೋರ್ಟ್ನಲ್ಲಿ ಇವರ ವಿರುದ್ಧ ಆದೇಶ ಬಂದರೆ ಮತ್ತೆ ಜಾಮೀನಿಗಾಗಿ ಹೈ ಕೋರ್ಟ್ ಮೊರೆ ಹೋಗಬೇಕಾಗುತ್ತಿದೆ. ಇನ್ನು ಹೈ ಕೋರ್ಟ್ನಲ್ಲಿ ಈಗಾಗಲೇ ಎರಡು ಎಫ್ಐಆರ್ಗಳಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ನಾಳೆ ತಿರಸ್ಕೃತಗೊಂಡರೆ ಕೆಳ ಹಂತದ ನ್ಯಾಯಾಲಯದಲ್ಲಿ ಈ ಎರಡೂ ಪ್ರಕರಣವನ್ನು ಎದುರಿಸಬೇಕಾಗುತ್ತದೆ.
ಆರೋಪವೇನು?: 2020ರ ಮಾರ್ಚ್ ಹಾಗೂ 2023ರ ಅಕ್ಟೋಬರ್ ನಡುವಣ ಅವಧಿಯಲ್ಲಿ ಬಿಎಂಟಿಸಿ ಡಿಪೋಗಳಲ್ಲಿ ವಾಣಿಜ್ಯ ಮಳಿಗೆಗಳ ಟೆಂಡರ್, ಸ್ವಚ್ಛತಾ ನಿರ್ವಹಣೆ ಟೆಂಡರ್ ನೀಡಿಕೆಯಲ್ಲಿ ಹಿರಿಯ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ ವಂಚನೆ ಎಸಗಲಾಗಿತ್ತು. ಈ ಕುರಿತು ಬಿಎಂಟಿಸಿ ವಿಚಕ್ಷಣಾ ದಳ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಪ್ರಮುಖ ಆರೋಪಿ ಶ್ರೀರಾಮ್ ಮುಲ್ಕವಾನ್ರನ್ನು ಬಂಧಿಸಲಾಗಿದೆ. ಕೇಸ್ನಲ್ಲಿ ಭಾಗಿಯಾಗಿರುವ ಆರು ಮಂದಿ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
ಬಿಎಂಟಿಸಿಗೆ ಸೇರಿದ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ರಿಯಾಯಿತಿ ನೀಡುವ ಸಂಬಂಧ ಕಡತ ತಯಾರಿಸಿ ಮಳಿಗೆ ಮಾಲೀಕರಿಗೆ ಅವಕಾಶ ಕಲ್ಪಿಸುವ ಸುತ್ತೋಲೆ ಹೊರಡಿಸಲಾಗಿತ್ತು. ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಬಹುದು ಎಂದು ನಕಲಿ ಟಿಪ್ಪಣಿ ತಯಾರಿಸಲಾಗಿತ್ತು. ಈ ಕಡತಗಳಿಗೆ ಬಿಎಂಟಿಸಿ ಜಾಗೃತ ದಳದ ನಿರ್ದೇಶಕ ಕೆ.ಅರುಣ್, ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ನಮೂದಿಸಲಾಗಿತ್ತು. ಪರಿಣಾಮ ಬಿಎಂಟಿಸಿಗೆ ಮೊದಲ ಬಾರಿಗೆ 10. 50 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಿತ್ತು. ಮತ್ತೊಂದು ವಂಚನೆ ಪ್ರಕರಣದಲ್ಲಿ 6.91 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಿ ಎಫ್ಐಆರ್ ದಾಖಲಾಗಿದೆ.
ಯಶವಂತಪುರ ಟಿಟಿಎಂಸಿಯ ಸ್ವಚ್ಛತಾ ನಿರ್ವಹಣೆ ಮಾಡುತ್ತಿದ್ದ ಶ್ರೀ ಲಕ್ಷ್ಮೀ ಎಂಟರ್ಪ್ರೈಸಸ್ಗೆ ಟೆಂಡರ್ ಅವಧಿ ಮುಕ್ತಾಯಗೊಂಡ ಬಳಿಕವೂ ಉನ್ನತ ಅಧಿಕಾರಿಗಳ ಅನುಮತಿ ಇಲ್ಲದೆ ಟೆಂಡರ್ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಇದರಿಂದಲೂ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬ ಆರೋಪದಡಿ ಮೂರನೇ ಬಾರಿಗೆ ಈ 7 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.