ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಸಾರಿಗೆಯ (BMTC) ಬಸ್ಗಳಿಂದ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಬಿಎಂಟಿಸಿ ಬಸ್ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ರಾಜಧಾನಿಯಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸಲು ಬಿಎಂಟಿಸಿ ಸಿಮ್ಯುಲೇಟರ್ ಮೂಲಕ ಚಾಲಕರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದ್ದು, ಇದು ಬಸ್ ಚಲಾಯಿಸಿದ ಅನುಭವವನ್ನೇ ನೀಡುವ ಡಿಜಿಟಲ್ ವ್ಯವಸ್ಥೆಯ ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಹೊಂದಿರುವ ಯಂತ್ರವಾಗಿದೆ.
ಈ ಸಿಮ್ಯುಲೇಟರ್ ಯಂತ್ರ ಬಿಎಂಟಿಸಿಯ ವಡ್ಡರಹಳ್ಳಿ ಚಾಲಕರ ತರಬೇತಿ ಕೇಂದ್ರದಲ್ಲಿದ್ದು, ಬಸ್ ಮಾದರಿಯಲ್ಲಿಯೇ ಚಕ್ರ, ಸೀಟು, ಸೀಟ್ ಬೆಲ್ಟ್, ಆಯಕ್ಸಿಲೇಟರ್, ಬ್ರೇಕ್, ಕ್ಲಚ್ ಹೊಂದಿದ್ದು ಎದುರಿಗೆ ಎಲ್ಇಡಿ ಸ್ಕ್ರೀನ್ ಹೊಂದಿದೆ. ಹೀಗಾಗಿ ಸಿಮ್ಯುಲೇಟರ್ನಲ್ಲಿ ರಸ್ತೆ ಮೇಲೆ ಬಸ್ ಚಲಾಯಿಸಿದ ಅನುಭವ ಆಗುತ್ತದೆ.
ದಿಣ್ಣೆಗಳನ್ನು ಏರುವಾಗ, ಇಳಿಯುವಾಗ, ತಿರುವುಗಳಲ್ಲಿ ಹೇಗೆ ವಾಹನ ಚಲಾಯಿಸಬೇಕು ಅತಿ ವಾಹನ ದಟ್ಟಣೆ ಇರುವ ಬೆಂಗಳೂರಿನಂತಹ ನಗರದಲ್ಲಿ ಹಿಂದೆ ಮುಂದೆ ವಾಹನಗಳು ಇರುವಾಗ ಹೇಗೆ ಚಾಲನೆ ಮಾಡಬೇಕು ಎಂಬುದನ್ನೆಲ್ಲ ಹೇಳಿ ಕೊಡಲಾಗುತ್ತದೆ. ಚಾಲನಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಸಲಾಗುತ್ತದೆ.
ವಿಶೇಷತ ತರಬೇತಿ ಕೇಂದ್ರ: ಮೊದಲಿಗೆ ಚಾಲಕರಿಗೆ ಕೈ ಮೂಲಕ ನೀಡಬೇಕಾದ ಸೂಚನೆಗಳ ಬಗ್ಗೆ, ಸಂಚಾರ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಿರುವ ಚಿಹ್ನೆಗಳ ಮಾಹಿತಿ, ಕ್ಲಚ್, ಗೇರ್, ಬ್ರೇಕ್, ಆಯಕ್ಸಿಲೇಟರ್‌ಗಳ ಬಗ್ಗೆ ತಜ್ಞರು ಹೇಳಿಕೊಡುತ್ತಾರೆ. ಬಳಿಕ ಸಿಮ್ಯುಲೇಟರ್ ಕೊಠಡಿಯಲ್ಲಿ ಚಾಲನೆ ಕಲಿಸುತ್ತಾರೆ. ಇಷ್ಟೇ ಅಲ್ಲದೆ ಬಸ್ಗಳಲ್ಲೂ ತರಬೇತಿ ನೀಡುತ್ತಾರೆ.
ಇಂಧನ ಉಳಿತಾಯ ಮಾಡಬೇಕಿದ್ದರೆ ಆಕ್ಸಿಲೇಟರ್ ಹೇಗೆ ಬಳಸಬೇಕು, ಕ್ಲಚ್, ಗೇರ್‌ಗಳನ್ನು ಹೇಗೆ ಬಳಸಿದರೆ ಇಂಧನ ಉಳಿಸಬಹುದು ಎಂಬುದನ್ನು ಕೂಡ ತಜ್ಞರು ಹೇಳಿಕೊಡುತ್ತಾರೆ.
ಇಇನ್ನು ಸೀಟ್‌ಬೆಲ್ಟ್‌ನಿಂದ ಹಿಡಿದು ಎಲ್ಲ ನಿಯಮಗಳನ್ನು ಪಾಲಿಸದಿದ್ದರೆ ಈ ಯಂತ್ರ ಚಾಲನೆಯಾಗುವುದಿಲ್ಲ. ಆನಂತರವೂ ಸಣ್ಣ ತಪ್ಪಾದರೂ ಗುರುತು ಆಗುವುದರಿಂದ ತಿದ್ದಿಕೊಳ್ಳಲು ಸುಲಭವಾಗುತ್ತದೆ. ಹೊಸಬರಿಗೆ ಮತ್ತು ಚಾಲನೆಯಲ್ಲಿ ಪದೇಪದೆ ತಪ್ಪು ಮಾಡುವವರಿಗೂ ‘ಸಿಮ್ಯುಲೇಟರ್’ ಡಿಜಿಟಲ್ ಯಂತ್ರದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಬಿಎಂಟಿಸಿ ಡ್ರೈವಿಂಗ್ ಸ್ಕೂಲ್ ಮೇಲ್ವಿಚಾರಕ ಮಧು ಹೇಳಿದ್ದಾರೆ.