ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 17 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದಲ್ಲಿ ಬಿಎಂಟಿಸಿಯ ಹಿಂದಿನ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್ ಸೇರಿದಂತೆ 7 ಮಂದಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧ 2ನೇ ಆರೋಪಿ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ ಎಸ್. ಮುದ್ದೋಡಿಗೆ ಷರತ್ತು ಬದ್ದ ಜಾಮೀನು ಮಂಜೂರಾಗಿದೆ.
ಸಿಟಿ ಸಿವಿಲ್ ನ್ಯಾಯಾಲಯದಲ್ಲಿ 17 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೀಗಾಗಿ ಶ್ಯಾಮಲಾ ಎಸ್. ಮುದ್ದೋಡಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಅವರ ಮೂಲಕ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದು, ಮಂಗಳವಾರ 67ನೇ ಕೋರ್ಟ್ ಹಾಲ್‌ನಲ್ಲಿ ವಿಚಾರಣೆ ನಡೆದು, ಅ.13ರಕ್ಕೆ ಕಾಯ್ದಿರಿಸಲಾಗಿತ್ತು. ನಿನ್ನೆ ಷರತ್ತು ಬದ್ದ ಜಾಮೀನು ಮಂಜೂರಾಗಿದೆ.
![](https://vijayapatha.in/wp-content/uploads/2021/07/4-july-Shivaraju-advocate-e1692545024672-300x172.jpg)
ಈ ನಡುವೆಯೇ ಹಿಂದೆ ದಾಖಲಾಗಿರುವ ಎರಡು ಎಫ್‌ಐಆರ್ (182/2023 ಮತ್ತು 183/2023)ಗಳಿಗೆ ತಡೆ ನೀಡುವಂತೆ ಶ್ಯಾಮಲಾ ಎಸ್. ಮುದ್ದೋಡಿ ಹೈ ಕೋರ್ಟ್‌ನಲ್ಲಿ ಎಚ್.ಬಿ.ಶಿವರಾಜು ಅವರ ಮೂಲಕವೇ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯ ವಿಚಾರಣೆಯೂ ಅ.13ರಂದೇ ಹೈಕೋರ್ಟ್‌ನ 20ನೇ ಹಾಲ್‌ನ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ಏಕ ಸದಸ್ಯ ಪೀಠದಲ್ಲಿ ನಡೆಯಿತು.
ಈ ಪ್ರಕರಣ ಸಂಬಂಧ ಬಿಎಂಟಿಸಿಗೆ ನೋಟಿಸ್ ಜಾರಿ ಮಾಡಿದ ಹೈ ಕೋರ್ಟ್ ಏಕ ಸದಸ್ಯ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಆರೋಪವೇನು?: 2020ರ ಮಾರ್ಚ್ ಹಾಗೂ 2023ರ ಅಕ್ಟೋಬರ್ ನಡುವಣ ಅವಧಿಯಲ್ಲಿ ಬಿಎಂಟಿಸಿ ಡಿಪೋಗಳಲ್ಲಿ ವಾಣಿಜ್ಯ ಮಳಿಗೆಗಳ ಟೆಂಡರ್, ಸ್ವಚ್ಛತಾ ನಿರ್ವಹಣೆ ಟೆಂಡರ್ ನೀಡಿಕೆಯಲ್ಲಿ ಹಿರಿಯ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ ವಂಚನೆ ಎಸಗಲಾಗಿತ್ತು. ಈ ಕುರಿತು ಬಿಎಂಟಿಸಿ ವಿಚಕ್ಷಣಾ ದಳ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಪ್ರಮುಖ ಆರೋಪಿ ಶ್ರೀರಾಮ್ ಮುಲ್ಕವಾನ್‌ರನ್ನು ಬಂಧಿಸಲಾಗಿದೆ. ಕೇಸ್‌ನಲ್ಲಿ ಭಾಗಿಯಾಗಿರುವ ಆರು ಮಂದಿ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
ಬಿಎಂಟಿಸಿಗೆ ಸೇರಿದ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ರಿಯಾಯಿತಿ ನೀಡುವ ಸಂಬಂಧ ಕಡತ ತಯಾರಿಸಿ ಮಳಿಗೆ ಮಾಲೀಕರಿಗೆ ಅವಕಾಶ ಕಲ್ಪಿಸುವ ಸುತ್ತೋಲೆ ಹೊರಡಿಸಲಾಗಿತ್ತು. ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡಬಹುದು ಎಂದು ನಕಲಿ ಟಿಪ್ಪಣಿ ತಯಾರಿಸಲಾಗಿತ್ತು.
ಈ ಕಡತಗಳಿಗೆ ಬಿಎಂಟಿಸಿ ಜಾಗೃತ ದಳದ ನಿರ್ದೇಶಕ ಕೆ.ಅರುಣ್, ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ನಮೂದಿಸಲಾಗಿತ್ತು. ಪರಿಣಾಮ ಬಿಎಂಟಿಸಿಗೆ ಮೊದಲ ಬಾರಿಗೆ 10. 50 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಿತ್ತು. ಮತ್ತೊಂದು ವಂಚನೆ ಪ್ರಕರಣದಲ್ಲಿ 6.91 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಾಗಿದೆ.
ಯಶವಂತಪುರ ಟಿಟಿಎಂಸಿಯ ಸ್ವಚ್ಛತಾ ನಿರ್ವಹಣೆ ಮಾಡುತ್ತಿದ್ದ ಶ್ರೀ ಲಕ್ಷ್ಮೀ ಎಂಟರ್‌ಪ್ರೈಸಸ್‌ಗೆ ಟೆಂಡರ್ ಅವಧಿ ಮುಕ್ತಾಯಗೊಂಡ ಬಳಿಕವೂ ಉನ್ನತ ಅಧಿಕಾರಿಗಳ ಅನುಮತಿ ಇಲ್ಲದೆ ಟೆಂಡರ್ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಇದರಿಂದಲೂ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬ ಆರೋಪದಡಿ ಮೂರನೇ ಬಾರಿಗೆ ಈ 7 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)