ಬೆಂಗಳೂರು: ಭಾರತದ ಜ್ವಲಂತ ಸಮಸ್ಯೆಗಳಾದ ಹಣದುಬ್ಬರ, ನಿರುದ್ಯೋಗ ಮುಂತಾದವುಗಳನ್ನು ಪರಿಹರಿಸುವಂತಹ ಆಯವ್ಯಯ ಮಂಡಿಸುವುದರಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ನಿರುದ್ಯೋಗ ಹಾಗೂ ಹಣದುಬ್ಬರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ಪರಿಣಾಮವಾಗಿ, ಉನ್ನತ ಶಿಕ್ಷಣ ಪಡೆದ ವಿದ್ಯಾವಂತರು ಕೂಡ ಸಣ್ಣಸಣ್ಣ ನೌಕರಿಗಳಲ್ಲಿ ತೊಡಗಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಇನ್ನು ಅಗತ್ಯ ವಸ್ತುಗಳನ್ನು ಖರೀದಿಸಲು ಕೂಡ ಜನಸಾಮಾನ್ಯರು ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಈ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಆಯವ್ಯಯವಾಗಿದ್ದು, ಇದರಲ್ಲಾದರೂ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿದರು.
ಶಿಕ್ಷಣ ಹಾಗೂ ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿ ಬಲವಾಗಿ ಪ್ರತಿಪಾದಿಸುತ್ತದೆ. ಇದರಿಂದ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಹಾಗೂ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ನಂಬಿದ್ದೇವೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಬಜೆಟ್‌ನಲ್ಲಿ ಶಿಕ್ಷಣ ವಲಯದ ಅನುದಾನವನ್ನು ಶೇ. 2.64ರಿಂದ ಶೇ. 2.5ಕ್ಕೆ ಇಳಿಸಿದ್ದಾರೆ.
ಆರೋಗ್ಯ ವಲಯದ ಅನುದಾನವನ್ನು ಶೇ. 2.2ರಿಂದ ಶೇ. 1.98ಕ್ಕೆ ಇಳಿಕೆ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಹಾಗೂ ಅಪಾಯಕಾರಿ ನಿಲುವು. ಬಜೆಟ್‌ನಲ್ಲಿ ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳನ್ನು ಮೆಚ್ಚಿಸಲು ಜನಸಾಮಾನ್ಯರ ಹಿತವನ್ನು ಕಡೆಗಣಿಸಲಾಗಿದೆ ಎಂದು ಹೇಳಿದರು.
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಹೆಸರಿನಲ್ಲಿ ಕೇವಲ 7.7% ಬಡ್ಡಿ ನೀಡುವ ಯೋಜನೆಯನ್ನು ಘೋಷಿಸಿರುವುದು ಮಹಿಳೆಯ ಮೂಗಿಗೆ ತುಪ್ಪ ಹಚ್ಚುವ ಕೆಲಸ. ಹಲವು ಬ್ಯಾಂಕ್‌ಗಳು ಇದಕ್ಕಿಂತ ಹೆಚ್ಚಿನ ಬಡ್ಡಿ ನೀಡುತ್ತಿರುವಾಗ, ಮಹಿಳೆಯರಿಗೆ ಈ ಯೋಜನೆಯಿಂದ ಹೆಚ್ಚಿನ ಲಾಭವಾಗದು.
ಅದರ ಬದಲು ಮಹಿಳೆಯರಿಗೆ ಮಾಸಿಕ ಆದಾಯ ನೀಡುವ ಹಾಗೂ ಉದ್ಯೋಗ ನೀಡುವ ಯೋಜನೆಗಳನ್ನು ಜಾರಿಗೆ ತರಬೇಕಿತ್ತು. ದೆಹಲಿ ಸರ್ಕಾರದಂತೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನಾದರೂ ಕೇಂದ್ರ ಸರ್ಕಾರ ಘೋಷಿಸಬಹುದಿತ್ತು ಎಂದು ಪೃಥ್ವಿ ರೆಡ್ಡಿ ಹೇಳಿದರು.