ಬೆಂಗಳೂರು: ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಶಾಲೆ ಹಾಗೂ ಕಸ್ತೂರಿ ನಗರದ ಪ್ರೆಸಿಡೆನ್ಸಿ ಶಾಲೆಗಳು ಬ್ರಾಂಡ್ ಬೆಂಗಳೂರು ಐಡಿಯಾಥಾನ್ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿವೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪ್ರಶಸ್ತಿ ಮಕ್ಕಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಖ್ಯಾತ ನಟ ರಮೇಶ್ ಅರವಿಂದ್ ಅವರು ಪ್ರಮಾಣ ಪತ್ರ ನೀಡಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ನಡೆಯುವ 40 ಗಂಟೆಗಳ ಅನ್ವೇಷಣೆ ಮತ್ತು ವ್ಯಾಪಾರೋದ್ಯಮ ಕುರಿತ ಕಾರ್ಯಕ್ರಮಕ್ಕೆ ಸ್ಕಾಲರ್ ಶಿಪ್ ಅನ್ನು ನೀಡಲಾಗುವುದು.
ಕಳೆದ ವರ್ಷ ನವೆಂಬರ್ 14ರಂದು ಆರಂಭವಾದ ಈ ಸ್ಪರ್ಧೆಯಲ್ಲಿ ಒಟ್ಟು 200 ಶಾಲೆಗಳು ಭಾಗವಹಿಸಿದ್ದು, ಎರಡನೇ ಸುತ್ತಿಗೆ 50 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ನಂತರ ಮೂರನೇ ಸುತ್ತಿನಲ್ಲಿ 25 ಶಾಲೆಗಳನ್ನು ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿಗೆ ಪ್ರಮುಖ 7 ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು.
ಇಂದು ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬನಶಂಕರಿಯ ಪ್ರೆಸಿಡೆನ್ಸಿ ಶಾಲೆ, ಎಸ್ ಜೆಆರ್ ಕೆಂಗೇರಿ ಪಬ್ಲಿಕ್ ಶಾಲೆ, ಒಕ್ರಿಡ್ಜ್ ಇಂಟರ್ ನ್ಯಾಷನಲ್ ಶಾಲೆ, ಸೆಂಟ್ ಮಾರ್ಕ್ಸ್ ಕಾನ್ವೆಂಟ್, ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ, ಮಿತ್ರಾ ಅಕಾಡೆಮಿ, ಕಸ್ತೂರಿನಗರದ ಪ್ರೆಸಿಡೆನ್ಸಿ ಶಾಲೆ ಭಾಗವಹಿಸಿದ್ದವು.
ಲೇಖಕಿ ಸುಧಾಮೂರ್ತಿ, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಡಾ. ಅನೂಪ್ ನಾಯಕ್, ಜಿ. ಬಾಲಸುಬ್ರಮಣಿಯನ್, ರಮೇಶ್ ಜೂಡ್ ಥಾಮಸ್ ಅವರು ಅಂತಿಮ ಸುತ್ತಿನ ತೀರ್ಪುಗಾರರಾಗಿದ್ದರು.