ಬೆಂಗಳೂರು: ಸಹಸ್ರಾರು ಗಿಡಗಳನ್ನು ನೆಟ್ಟು, ಅವುಗಳನ್ನು ತಾಯಿಯಂತೆ ಪೊರೆದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಸ್ವಾರ್ಥ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ತಿಮ್ಮಕ್ಕನವರಿಗೆ ಈ ಹಿಂದೆ ನೀಡಲಾಗಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮುಂದುವರಿಸಿ ಹಾಗೂ ಪರಿಸರ ರಾಯಭಾರಿಯಾಗಿ ಅವರನ್ನೇ ಮುಂದುವರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಕಳೆದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ 8- 2022ರಂದು ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಿಸಿರುವುದರ ಜತೆಗೆ ಅವರಿಗೆ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ಕೂಡ ನೀಡಿತ್ತು.
ರಾಜ್ಯದ ಉದ್ದಗಲಕ್ಕೂ ಪರಿಸರ ರಕ್ಷಣೆಯ ಕುರಿತು ಪ್ರಚಾರ ಮಾಡಲು ತಿಮ್ಮಕ್ಕ ಅವರಿಗೆ ಈ ಸ್ಥಾನಮಾನ ನೀಡಲಾಗಿದೆ. ಹೊರ ರಾಜ್ಯಕ್ಕೆ ತೆರಳಿದರೆ ಸರ್ಕಾರವೇ ಖರ್ಚು ಭರಿಸಲಿದೆ ಎಂದು ಅಂದಿನ ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಅದು ಮುಂದುವರಿಯಲಿದೆ.
ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸೂರು ಗ್ರಾಮದವರು. ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭಿಸಲಿಲ್ಲ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ. ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದ ಪರಿಸರವಾದಿ.
ಮುಂದಿನ ಪೀಳಿಗೆಯ ಹಿತದೃಷ್ಟಿಯನ್ನು ಇಟ್ಟುಕೊಂಡು ಮರಗಳಿಗೆ ದೂರದ ಸ್ಥಳದಿಂದ ನೀರನ್ನು ಹೊತ್ತುತಂದು ಆಲದ ಸಸಿಗಳಿಗೆ ನೀರುಣಿಸಿ ಬೆಳೆಸಿದರು ತಿಮ್ಮಕ್ಕ. ಅವರ ಪರಿಸರ ಸಂರಕ್ಷಣೆ ಕಾರ್ಯವನ್ನು ಶ್ಲಾಘಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ. ತಿಮ್ಮಕ್ಕ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳೂ ಲಭಿಸಿವೆ.