ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದ ಪರಿಣಾಮ ಚಾಲಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ತಿಬ್ಬನಹಳ್ಳಿ ಗ್ರಾಮದ ಬಳಿ ನಡೆದಿದೆ.
ಜಿಲ್ಲೆಯ ಶಿವಳ್ಳಿ ಗ್ರಾಮದ ಲೋಕೇಶ್ ಎಂಬುವರೆ ನೀರು ಪಾಲಾಗಿದ್ದು, ಕಾರಿನಲ್ಲಿದ್ದ ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳೆದು ನಿಂತಿರುವ ಬೆಳೆ ರಕ್ಷಣೆಗಾಗಿ ಕೃಷ್ಣರಾಜ ಸಾಗರದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡಲಾಗಿದೆ. ಹೀಗಾಗಿ ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು, ನಾಲೆಯ ಆಳ 18 ಅಡಿ ಇರುವುದರಿಂದ ಕಾರು ನೀರಿನಲ್ಲಿ ಮುಳುಗಿದೆ. ಅದರಿಂದ ಪಾರಾಗಲು ಸಾಧ್ಯವಾಗದೆ ಚಾಲಕ ಲೋಕೇಶ್ ಜಲಸಮಾಧಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಮೇಲೆತ್ತುವ ಕಾರ್ಯಾಚರಣೆ ಮಾಡುತಿದ್ದಾರೆ.
ಶಿವಳ್ಳಿಯಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡು ಜತೆಗೆ ವ್ಯವಸಾಯ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಲೋಕೇಶ್ ಸ್ನೇಹಿತನ ಜತೆಗೂಡಿ ಸ್ವಿಫ್ಟ್ ಕಾರಿನಲ್ಲಿ ಕಾರ್ಯನಿಮಿತ್ತ ಪಾಂಡವಪುರಕ್ಕೆ ತೆರಳುತ್ತಿದ್ದರು. ಈ ವೇಳೆ ತಿಬ್ಬನಹಳ್ಳಿ ಮೂಲಕ ಹಾದು ಹೋಗುವಾಗ ವಿಶ್ವೇಶ್ವರಯ್ಯ ನಾಲೆ ಬಳಿ ಕಾರು ನಿಯಂತ್ರಣ ತಪ್ಪಿ ನಾಲೆಯೊಳಗೆ ಬಿದ್ದು ಅವಘಡ ಸಂಭವಿಸಿದೆ.
ಕಾರಿನಲ್ಲಿದ್ದ ಲೋಕೇಶ್ ಶ್ನೇಹಿತ ಅಪಘಾತ ಸಂಭವಿಸುತ್ತಿದ್ದಂತೆ ಕಾರಿನ ಕಿಟಕಿ ಗಾಜು ಒಡೆದುಕೊಂಡು ಹರಿಯುತ್ತಿದ್ದ ನೀರಿನಲ್ಲಿ ಈಜುಕೊಂಡು ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಕಾರು ಬಿದ್ದಾಕ್ಷಣ ಗಾಬರಿಗೊಂಡಿದ್ದ ಚಾಲಕ ಎಚ್ಚೆತ್ತುಕೊಂಡು ಹೊರಗೆ ಬರುವಷ್ಟರಲ್ಲಿಯೇ ಕಾರು ನೀರಿನಲ್ಲಿ ಸಂಪೂರ್ಣ ಮುಳುಗಿ ಹೋಗಿದೆ.
ಪರಿಣಾಮ ಲೋಕೇಶ್ ಕಾರಿನಿಂದ ಹೊರಬರಲು ಯತ್ನಿಸಿದರೂ ನೀರು ರಭಸವಾಗಿ ಹರಿಯುತ್ತಿದ್ದರಿಂದ ದಡ ಸೇರಲಾಗದೇ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗುತ್ತಿದೆ. ನೀರು ಪಾಲಾಗಿರುವ ಲೋಕೇಶ್ಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಘಟನೆ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.