ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದು ಸೆ.23ರಂದು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮತ್ತು ರಾಜ್ಯಕ್ಕೆ ಆಗಿರುವ ಅನ್ಯಾಯ ಪ್ರತಿಭಟಿಸಿ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರು ಸೇರಿದಂತೆ ಕರ್ನಾಟಕ ಬಂದ್‌ಗೂ ಇಂದೇ ದಿನ ಫಿಕ್ಸ್ ಆಗುವ ಸಾಧ್ಯತೆ ಕೂಡ ಇದೆ.
ಕಾವೇರಿಗಾಗಿ ಕನ್ನಡಪರ ಹೋರಾಟಗಾರರು ಈಗಾಗಲೇ ರೋಡಿಗಿಳಿದಿದ್ದು, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಕೂಡ ಆ ಪ್ರತಿಭಟನೆ ಮುಂದುವರಿದಿದ್ದು, ಅದು ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ. ಈ ಹಿನ್ನೆಲಯಲ್ಲಿ ಬೆಂಗಳೂರು ಅಥವಾ ಕರ್ನಾಟಕ ಬಂದ್ ದಿನಾಂಕವೂ ಇಂದೇ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಇಂದು ಬೆಳಗ್ಗೆ 11 ಗಂಟೆಗೆ ಫ್ರೀಡಂಪಾರ್ಕ್‌ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಹಲವಾರು ಸಂಘಟನೆಗಳು ಭಾಗಿಯಾಗಿವೆ. ಬೆಂಗಳೂರಿನ ಪ್ರಮುಖ ಅಪಾರ್ಟ್ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿವೆ. ಈ ಸಭೆಯಲ್ಲಿ ಹೋರಾಟದ ರೂಪುರೇಷೆ ನಿರ್ಧಾರವಾಗಲಿದೆ.
ಹಲವು ಪ್ರತಿಭಟನೆಗಳು: ಬೆಳಗ್ಗೆ 10.30ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಿಂದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಕುವೆಂಪು ಪ್ರತಿಮೆ ಮುಂದೆ ಪ್ರತಿಭಟನೆ. ಕರವೇಯ ನೂರಾರು ಕಾರ್ಯಕರ್ತರು ಭಾಗಿ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದಿಂದ ಬೆಳಗ್ಗೆ 10 ಗಂಟೆಗೆ ಕರ್ನಾಟಕ- ತಮಿಳುನಾಡು ಅತ್ತಿಬೆಲೆ ಗಡಿ ಬಂದ್ ಆಗಲಿದ್ದು, ಕರವೇಯ ಸಾವಿರಾರು ಕಾರ್ಯಕರ್ತರು ಭಾಗುತ್ತಿದ್ದಾರೆ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರಿನಿಂದ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನಿಂದ ಬೆಳಗ್ಗೆ 11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಮಧ್ಯಾಹ್ನ 1-30 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ಕನ್ನಡಸೇನೆಯ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ್, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಕನ್ನಡಪರ ಹೋರಾಟಗಾರ ಎಚ್.ವಿ. ಗಿರೀಶ್ ಗೌಡ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ.