ಮಂಡ್ಯ: ಕಾವೇರಿ ಹೋರಾಟದ ಕಿಚ್ಚು ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಲೇ ಇದ್ದು, ಮಂಡ್ಯದ ಸಂಜಯ್ ವೃತ್ತದಲ್ಲಿ ಇಂದು ನಡೆಯಲಿರುವ ವಿನೂತನ ಚಡ್ಡಿ ಚಳವಳಿಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಪುತ್ರ ಶಾಸಕ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಸಾಥ್ ನೀಡುತ್ತಿದ್ದಾರೆ.
ಚಡ್ಡಿ ಪ್ರತಿಭಟನೆ ಬಳಿಕ ರೈತ ಹಿತರಕ್ಷಣಾ ಸಮಿತಿ ಹೋರಾಟದಲ್ಲಿಯೂ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ಅಲ್ಲದೆ ಕೆಆರ್‌ಎಸ್‌ನಲ್ಲಿ ಇಂದು ಪ್ರತಿಭಟನೆ ನಡೆಯಲಿದ್ದು, ಹಿರಿಯ ನಟಿ ಲೀಲಾವತಿ ಭಾಗಿಯಾಗಲಿದ್ದಾರೆ. ನಂತರ ಮಂಡ್ಯದಲ್ಲಿ ನಡೆಯುತ್ತಿರುವ ರೈತ ಹಿತ ರಕ್ಷಣಾ ಸಮಿತಿ ಹೋರಾಟವನ್ನೂ ಬೆಂಬಲಿಸಲಿದ್ದಾರೆ.
ಅಷ್ಟೇ ಅಲ್ಲದೇ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ಭೂಮಿ ತಾಯಿ ಹೋರಾಟ ಸಮಿತಿಯಿಂದ ಘಂಟೆ ಚಳವಳಿ ನಡೆಸಲು ನಿರ್ಧರಿಸಿದೆ. ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲದಿಂದ ತಾಲೂಕು ಕಚೇರಿ ವರೆಗೆ ಘಂಟೆ ಹೊಡೆದುಕೊಂಡು ಹೋಗುವ ಮೂಲಕ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತಿದೆ.
ಈ ಹೋರಾಟದಲ್ಲಿ ರೈತಪರ ಸಂಘಟನೆ ಜೊತೆ ಹಲವು ಕನ್ನಡಪರ ಸಂಘಟನೆಗಳು ಸಾಥ್ ನೀಡುತ್ತಿದ್ದು, ಪ್ರತಿಭಟನೆಯ ಕಿತ್ತು ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ತಮಿಳುನಾಡಿಗೆ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂದು KRS ಡ್ಯಾಂನಿಂದ 4105 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಲಾಗುತ್ತಿದೆ. ನಿನ್ನೆ 3838 ಕ್ಯೂಸೆಕ್, ಮೊನ್ನೆ 2973 ಕ್ಯೂಸೆಕ್ ನೀರು ಹರಿಸಲಾಗಿದೆ. ಅತ್ತ ಕಬಿನಿ ಜಲಾಶಯದಿಂದಲೂ ತಮಿಳುನಾಡಿಗೆ ನೀರು ಬಿಟ್ಟಿದ್ದು, ಇಂದು ಏಕಾಏಕಿ 4105 ಕ್ಯೂಸೆಕ್‌ಗೆ ಸರ್ಕಾರ ಏರಿಕೆ ಮಾಡಿದೆ. ಇದು ಈಗ ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾಗಿದೆ.