ಮಂಗಳೂರು: ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮಂಗಳೂರಿನ ಆರ್ಟಿಒ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಮೆಟ್ರೋಗಳ ನಿರ್ಮಾಣ, ನಿರ್ವಹಣೆ ಮತ್ತು ದರ ನಿಗದಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೇಂದ್ರ ಸರ್ಕಾರದ ನಗರ ಅಭಿವೃದ್ಧಿ ಸಚಿವಾಲಯವೇ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
ಇನ್ನು ರಾಜ್ಯ ಸರ್ಕಾರವು ಸಬ್ಸಿಡಿ ಮೂಲಕ ಹಣವನ್ನು ನೀಡುತ್ತದೆ. ಈ ನಿರ್ಣಯಕ್ಕಾಗಿ ಕೇಂದ್ರ ಮತ್ತು ರಾಜ್ಯದ ಪ್ರತಿನಿಧಿಗಳನ್ನು ಒಳಗೊಂಡ ಕಮಿಟಿ ಇದೆ. ಆದರೆ ಅಂತಿಮ ಅಧಿಕಾರ ಕೇಂದ್ರದ್ದೇ ಆಗಿರುತ್ತದೆ ಎಂದರು ಸಚಿವ ರಾಮಲಿಂಗಾ ರೆಡ್ಡಿ.
ಕೇಂದ್ರ ಸರ್ಕಾರವೇ ದರ ಏರಿಸಿದೆ. ಅದನ್ನು ಧೈರ್ಯವಾಗಿ ಒಪ್ಪಿಕೊಳ್ಳಬೇಕು. ನಾವು ರಾಜ್ಯದ ಬಸ್ ದರ ಏರಿಕೆ ಮಾಡಿದಾಗ ಅದರ ಕಾರಣಗಳನ್ನು ಸ್ಪಷ್ಟವಾಗಿ ಮಾಧ್ಯಮಗಳ ಮುಂದೆ ವಿವರಿಸಿದ್ದೇವೆ. ಬಿಜೆಪಿ ನಾಯಕರು ಯಾವುದೇ ಸಮಸ್ಯೆ ಬಂದರೂ ಕಾಂಗ್ರೆಸ್ ಮೇಲೆ ಹೊರಿಸುತ್ತಾರೆ ಎಂದು ಟೀಕಿಸಿದರು.
ಇನ್ನು ಕೆಪಿಸಿಸಿ ಅಧ್ಯಕ್ಷ ಪದವಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷದ ಹೈಕಮಾಂಡ್ ಈ ವಿಷಯದಲ್ಲಿ ಯಾರೂ ಮಾತನಾಡಬಾರದು ಎಂದು ಸೂಚಿಸಿದೆ. ಅದರಂತೆ, ನಾನು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.