ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ- ಜನವಿರೋಧಿ ನೀತಿಗಳ ವಿರುದ್ಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 13 ರಂದು ಸಂಯುಕ್ತ ಕಿಸಾನ್ ಮೋರ್ಛಾ ಹಾಗೂ ದೇಶದ ಎಲ್ಲಾ ರೈತ ಸಂಘಗಳು ಜಂಟಿಯಾಗಿ ಹಮ್ಮಿಕೊಂಡಿರುವ ಮಹಾಧರಣಿಗೆ ತಡೆಯೊಡ್ಡಲು ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಪ್ರಯತ್ನ ಮಾಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.
ಅನ್ನ ಕೊಡುವ ರೈತರು ದೆಹಲಿಗೆ ಬರದಂತೆ ತಡೆಯೊಡ್ಡುವುದಕ್ಕೆ ಇಂಡಿಯಾ – ಪಾಕಿಸ್ತಾನ ಗಡಿಯಲ್ಲಿ ಹಾಕುವ ರೀತಿಯಲ್ಲಿ ಕಬ್ಬಿಣದ ಮುಳ್ಳಿನ ಬೇಲಿಗಳನ್ನು ಹಾಕಲಾಗಿದೆ, ರಸ್ತೆಗಳಲ್ಲಿ ದಪ್ಪ ದಪ್ಪ ಸ್ಟೀಲ್ ಮೊಳೆಗಳನ್ನು ಹೊಡೆಯಲಾಗಿದೆ. ಹೈವೇಗಳನ್ನು ಬಂದ್ ಮಾಡಿ ದೊಡ್ಡ ದೊಡ್ಡ ಸಿಮೆಂಟ್ ಸ್ಲ್ಯಾಬ್ ಗಳನ್ನು ಹಾಕಲಾಗಿದೆ. ಎಲ್ಲಿ ಸಾಧ್ಯವೋ ಅಲ್ಲಿ ರೈತರನ್ನು ಬಂಧಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಆಡಳಿತ ಇರುವ ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಪೊಲೀಸ್ ಬಲದಿಂದ ರೈತರನ್ನು ಬಂಧಿಸಿ ಹಿಂಸೆ ಪಡಿಸಲಾಗುತ್ತಿದೆ. ಈ ರಾಜ್ಯಗಳ ಪೊಲೀಸರಿಂದ ಗುಂಡಿನ ದಾಳಿಯ ತಾಲೀಮು ನಡೆಸಲಾಗುತ್ತಿದೆ. ದೆಹಲಿಯ ಗಡಿಗಳಲ್ಲಿ ಅತೀ ಹೆಚ್ಚು ಸೇನೆ ನಿಯೋಜನೆಗೊಂಡಿದೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಿಂದ ಫೆಬ್ರವರಿ 13 ರ ಧರಣಿಗೆ ಹೊರಟಿದ್ದ 300ಕ್ಕೂ ಹೆಚ್ಚು ರೈತರನ್ನು ಮಾರ್ಗ ಮಧ್ಯೆದಲ್ಲಿಯೇ ಭೋಪಾಲ್ ನಗರದಲ್ಲಿ, ರೈಲಿನಿಂದ ಇಳಿಸಿ, ಅಕ್ರಮವಾಗಿ ಬಂಧಿಸಿ, ಕಲ್ಯಾಣ ಮಂಟಪಗಳಲ್ಲಿ ಕೂಡಿ ಹಾಕಲಾಗಿದೆ, ಈ ವೇಳೆಯಲ್ಲಿ ಪೊಲೀಸರ ತಳ್ಳಾಟದಿಂದ, ರಾಜ್ಯದ ಪ್ರಮುಖ ರೈತ ನಾಯಕರಾದ ಕುರಬೂರು ಶಾಂತಕುಮಾರ್ ಅವರ ಪತ್ನಿ ಶ್ರೀಮತಿ ಪದ್ಮಾ ಶಾಂತಕುಮಾರ್ ಅವರೂ ಸೇರಿದಂತೆ ಹಲವು ರೈತರಿಗೆ ಗಾಯಗಳಾಗಿವೆ. ಅನ್ನ ಕೊಡುವ ರೈತರನ್ನು ಉಗ್ರಗಾಮಿಗಳ ರೀತಿಯಲ್ಲಿ ಬಿಂಬಿಸಿಕೊಂಡು ಅವರಿಗೆ ತಡೆಯೊಡ್ಡುತ್ತಿರುವ ಈ ಸರ್ವಾಧಿಕಾರಿ ಮನಸ್ಥಿತಿಯ ಕೇಂದ್ರ ಸರ್ಕಾರದ ನಡೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ.
ರೈತರ ಪ್ರಮುಖ ಬೇಡಿಕೆಗಳು: * ರೈತರ ಸಾಲಮನ್ನಾ ಮಾಡಬೇಕು, * ಸ್ವಾಮಿನಾಥನ್ ವರದಿ ಜಾರಿಯಾಗಬೇಕು, * ರೈತರು ಬೆಳೆದ ಬೆಳೆಗೆ ಸರಿಯಾದ ಎಂಎಸ್ಪಿ ನಿಗದಿಯಾಗಬೇಕು.* 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಕೊಡಬೇಕು. ಈ ಬೇಡಿಕೆಗಳೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ರೈತರನ್ನು ಉಗ್ರಗಾಮಿಗಳಂತೆ ನೋಡುವ ಮನಸ್ಥಿತಿಯನ್ನು ಕೇಂದ್ರ ಸರ್ಕಾರ ಬಿಡಬೇಕು, ಈಗ ವಿವಿಧ ರಾಜ್ಯಗಳಲ್ಲಿ ಬಂಧಿಸಿರುವ ರಾಜ್ಯದ ರೈತರನ್ನೂ ಸೇರಿದಂತೆ ಎಲ್ಲ ರೈತರನ್ನು ಬಿಡುಗಡೆ ಮಾಡಿ ಅವರು ಪ್ರತಿಭಟನೆಗೆ ತೆರಳಲು ಅನುವು ಮಾಡಿಕೊಡಬೇಕು, ರೈತರ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸಚಿವರು ರೈತರ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಮಾಡಬಾರದು.
ಈಗ ನಿಯೋಜಿಸಿರುವ ಸೇನೆ ಹಾಗೂ ಪೊಲೀಸ್ ಹಿಂತೆಗೆದುಕೊಳ್ಳಬೇಕು ಮತ್ತು ರೈತರಿಗೆ ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತಿದ್ದೇವೆ, ಕೇಂದ್ರ ಸರ್ಕಾರದ ಇದೇ ರೀತಿಯ ಸರ್ವಾಧಿಕಾರಿ ಧೋರಣೆ ಮುಂದುವರಿದರೆ, ರಾಷ್ಟ್ರದಾದ್ಯಂತ ರೈತರ ಪರವಾಗಿ ಜನಾಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷವು ಎಚ್ಚರಿಸುತ್ತಿದೆ ಎಂದು ತಿಳಿಸಿದ್ದಾರೆ.