ಡಿ.31ರೊಳಗೆ KSRTC ಸೇರಿ ಇಪಿಎಸ್ ನಿವೃತ್ತರ ಬೇಡಿಕೆ ಈಡೇರಿಕೆಗೆ ಬಹುತೇಕ ಒಪ್ಪಿದ ಕೇಂದ್ರ ಸರ್ಕಾರ: ನಂಜುಂಡೇಗೌಡ
ನ್ಯೂಡೆಲ್ಲಿ: EPS ನಿವೃತ್ತರ ಎಲ್ಲ ಬೇಡಿಕೆಗಳನ್ನು ಇದೇ ಡಿ.31ರ ಒಳಗೆ ಬಗೆಹರಿಸುವುದಾಗಿ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು NAC ಮುಖಂಡರನ್ನು ಖುದ್ದು ಭೇಟಿ ಮಾಡಿ, ಸಮಾಲೋಚನೆ ನಡೆಸಿದ ಬಳಿಕ ಸಂಪೂರ್ಣ ಬರವಸೆ ನೀಡಿದರು ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೂ ಮೊದಲು ದೆಹಲಿಯ ಇಪಿಎಫ್ಒ ಅಧಿಕಾರಿಗಳು ಕೂಡ ತನ್ನ ಪೋರ್ಟಲ್ನಲ್ಲೇ ಮಾಹಿತಿ ನೀಡಿದ್ದು, FAQ (frequently asked questions) ಅಂದರೆ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳು ಹಾಗೆಯೇ ಉದ್ಯೋಗದಾತರು ಕಾರ್ಮಿಕ ಸಂಘಟನೆಗಳು, ಉದ್ಯೋಗಿಗಳು ಆಗಿಂದಾಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಗರಿಷ್ಠ ಪಿಂಚಣಿಗೆ ಸಂಬಂಧಿಸಿದಂತೆ ಒಟ್ಟು ಏಳು ಅಂಶಗಳ ಬಗ್ಗೆ ಸ್ಪಷ್ಟನೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶ 4-11-2022ರ ಪ್ರಕಾರ 01.09.2014ಕ್ಕೂ ಮೊದಲು ನಿವೃತ್ತರಿಗೆ ಜಂಟಿ ಆಯ್ಕೆ ಪತ್ರ ಸಲ್ಲಿಸುವುದಕ್ಕೆ ಮೂರು ನಿಬಂಧನೆಗಳನ್ನು ವಿಧಿಸಿದ್ದು, ಅವು ಈ ರೀತಿ ಇವೆ.
1) ಉದ್ಯೋಗದಾತ ಹಾಗೂ ಉದ್ಯೋಗಿ ಜಂಟಿ ಆಯ್ಕೆ ಪತ್ರ ಸಲ್ಲಿಸಿದ ಬಗ್ಗೆ ದಾಖಲೆ. 2) ಈ ಜಂಟಿ ಆಯ್ಕೆ ಪತ್ರ ತಿರಸ್ಕೃತಗೊಂಡ ಬಗ್ಗೆ ದಾಖಲೆ. 3) ವೇತನ ಸೀಲಿಂಗ್ ಅಂದರೆ 8.33% ಗಿಂತ ಹೆಚ್ಚುವರಿ ಹಣ ತುಂಬಿದ ಬಗ್ಗೆ ದಾಖಲೆ. ಕೆಎಸ್ಆರ್ಟಿಸಿಗೆ ಸಂಬಂಧಿಸಿದಂತೆ ಈ ಮೂರು ಅಂಶಗಳನ್ನು ಸಂಸ್ಥೆಯು ಪಾಲನೆ ಮಾಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು 01-09-2014ರ ನಂತರ ನಿವೃತ್ತರಾದ ನೌಕರರು ಹೆಚ್ಚುವರಿ ಪಿಂಚಣಿ ಪಡೆಯುವುದು ಹೇಗೆ?: 1) ಉದ್ಯೋಗದಾತನು ವೇತನ ಸೀಲಿಂಗ್ 5000, 6500, 15000 ರೂ.ಗಳನ್ನು ಮೀರಿದ ಉದ್ಯೋಗಿಯ ವೇತನದೊಂದಿಗೆ ಪಿಎಫ್ ಕಚೇರಿಗೆ ಕಳುಹಿಸಿದ ದೇಣಿಗೆಯ ವಿವರಗಳು. 2) ಉದ್ಯೋಗದಾತರಿಂದ ಪಾವತಿಸಬೇಕಾದ ಆಡಳಿತಾತ್ಮಕ ಶುಲ್ಕವನ್ನು ನೀಡಲಾಗಿದೆ ಎಂಬ ಬಗ್ಗೆ ದಾಖಲೆ.
3) ಉದ್ಯೋಗದಾತನು ತನ್ನ ನೌಕರನ ವಂತಿಗೆ ಹಣ ಹಾಗೂ ಅದಕ್ಕೆ ಲಗಾಯ್ತಿನಿಂದ ಬಡ್ಡಿ ಲೆಕ್ಕಾಚಾರ ಮಾಡಿ ಇಪಿಎಸ್ ಕಾಯಿದೆ ಪ್ರಕಾರ ಸಂದಾಯಿಸಿದ ಬಗ್ಗೆ ದೃಢೀಕರಿಸಬೇಕು. 4) ಈ ಎಲ್ಲ ಅಂಶಗಳ ಬಗ್ಗೆ ಪಿಎಫ್ ಅಧಿಕಾರಿಗಳು ದಾಖಲೆಗಳನ್ನು ಕ್ರೋಢಿಕರಿಸಿ, ಉದ್ಯೋಗದಾತರಿಂದ ಪಡೆಯುವುದು ಅವರ ಆದ್ಯ ಕರ್ತವ್ಯವಾಗಿದೆ.
5) ನೌಕರನ ನಿವೃತ್ತಿಯ ಹಿಂದಿನ 60 ತಿಂಗಳ ಸರಾಸರಿ ವೇತನವನ್ನು ಲೆಕ್ಕ ಹಾಕಿ ಆತನ ಒಟ್ಟು ಸೇವಾವಧಿಯನ್ನು ಗಣನೆಗೆ ತೆಗೆದುಕೊಂಡು 70 ರಿಂದ ಭಾಗಿಸಿದರೆ ಬರುವ ಮೊತ್ತವೇ ಆತನ ಪಿಂಚಣಿ ಆಗಿರುತ್ತದೆ. 6) ಉದ್ಯೋಗಿಯಿಂದ ಭರಿಸುವ ಅಥವಾ ಉದ್ಯೋಗಿಗೆ ನೀಡುವ ಪಿಂಚಣಿ ಮೊತ್ತವು ಆದಾಯ ತೆರಿಗೆ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. 7) ಆನ್ಲೈನ್ನಲ್ಲಿ ಉದ್ಯೋಗಿಯು ಸೂಕ್ತ ದಾಖಲೆಗಳನ್ನು ಅಪ್ ಲೋಡ್ ಮಾಡಿಲ್ಲ ಎಂಬ ಕಾರಣದ ಮೇಲೆ ಉದ್ಯೋಗಿಯ ಅರ್ಜಿಯನ್ನು ತಿರಸ್ಕರಿಸಲು ಬರುವುದಿಲ್ಲ ಎಂದು ಇಪಿಎಫ್ಒ ಸ್ಪಷ್ಟಪಡಿಸಿದೆ.
ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರು: ಒಟ್ಟಾರೆ, 01-09-2014ರ ನಂತರ ನಿವೃತ್ತರಾದ ನೌಕರರು ಹಾಗೂ ಹಾಲಿ ಸೇವೆಯಲ್ಲಿರುವ ನೌಕರರು ಈ ಮೇಲೆ ಹೇಳಿದಂತೆ ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಿದ್ದು, 01 -09-2014ಕ್ಕೂ ಮೊದಲು ನಿವೃತ್ತರಾದವರಿಗೆ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ, ಇತ್ತೀಚೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಜರುಗಿದ ಬೃಹತ್ ಪ್ರತಿಭಟನಾ ಸಭೆ ಹಾಗೂ ಜಂತರ್ ಮಂತರ್ನಲ್ಲಿ ನಡೆದ ಅಮರಣಾಂತ ಉಪವಾಸ ಸತ್ಯಾಗ್ರಹ, ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕೆಂದು, ಪಟ್ಟು ಹಿಡಿದ್ದರು.
ಈ ವೇಳೆ ನಿವೃತ್ತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕಾರ್ಮಿಕ ಸಚಿವ ( minister for labour & employment) ಭೂಪೇಂದ್ರ ಯಾದವ್ ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ NAC ಮುಖಂಡರನ್ನು ಖುದ್ದು ಭೇಟಿ ಮಾಡಿ, ಸಮಾಲೋಚನೆ ನಡೆಸಿ, EPS ನಿವೃತ್ತರ ಎಲ್ಲ ಬೇಡಿಕೆಗಳನ್ನು ಇದೇ ಡಿ.31ರ ಒಳಗೆ ಬಗೆಹರಿಸಿ ಕೊಡುವುದಾಗಿ ಸಂಪೂರ್ಣ ಭರವಸೆ ಕೊಟ್ಟಿದೆ.
ಒಟ್ಟಾರೆ, ಹೋರಾಟದ ಪ್ರತಿಫಲವಾಗಿ, ಇತ್ತೀಚಿನ ಎಲ್ಲ ಬೆಳವಣಿಗೆಗಳು ಆಶಾದಾಯಕವಾಗಿದ್ದು, ನಿವೃತ್ತರು ಮುಸ್ಸಂಜೆ ಕಾಲದಲ್ಲಿ, ತಮ್ಮ ಬದುಕಿನ ಬೆಳಕನ್ನು ಕಾಣಲಿದ್ದಾರೆ ಎಂದು ನಿರೀಕ್ಷಿಸುತ್ತಿರುವುದಾಗಿ ನಂಜುಡೇಗೌಡ ತಿಳಿಸಿದ್ದಾರೆ.