ಚನ್ನಪಟ್ಟಣ: ಮಾವಿನ ತೋಟ ಕಾಯುತ್ತಿದ್ದ ಕೆಲಸಗಾರನನ್ನು ಕಾಡಾನೆ ದಾಳಿ ಮಾಡಿ ಸಾಯಿಸಿರುವ ಘಟನೆ ತಾಲೂಕಿನಲ್ಲಿ ಕಳೆದ ರಾತ್ರಿ ನಡೆದಿದೆ.
ತಾಲೂಕಿನ ವಿರುಪಸಂದ್ರ ಗ್ರಾಮದ ದೇವರಾಜು ಎಂಬುವರಿಗೆ ಸೇರಿದ ಮಾವಿನತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಮಾವಿನ ಫಸಲು ನಾಶಮಾಡುವ ಜತೆಗೆ ತೋಟದ ಕಾವಲುಗಾರ ವೀರಭದ್ರಯ್ಯ ಎಂಬಾತನ್ನು ತುಳಿದು ಸಾಯಿಸಿವೆ. ಮೃತ ವೀರಭದ್ರಯ್ಯ, ಮೂಲತಃ ಕನಕಪುರ ತಾಲೂಕಿನ ಬಸವನಹಳ್ಳಿ ಗ್ರಾಮದವರು.
ಮಾವಿನತೋಟ ಕಾಯುವ ಕೆಲಸ ಮಾಡುತ್ತಿದ್ದ ವೀರಭದ್ರಯ್ಯ ಪ್ರತಿದಿನ ರಾತ್ರಿ 10 ಗಂಟೆಯವರೆಗೆ ತೋಟದಲ್ಲಿ ಕಾವಲು ಕೆಲಸ ಮಾಡಿ ಮನೆಗೆ ವಾಪಸ್ಸಾಗಿ ನಂತರ ಮತ್ತೆ ಬೆಳಗಿನ ಜಾವ 5 ಗಂಟೆಗೆ ತೋಟಕ್ಕೆ ತೆರಳುತ್ತಿದ್ದ. ಇಂದು ಸಹ ಎಂದಿನಂತೆ ಬೆಳಗಿನ ಜಾವ ತೋಟಕ್ಕೆ ಬಂದ ಸಮಯದಲ್ಲಿ ಪುಂಡಾನೆ ದಾಳಿ ಮಾಡಿ ಅವರನ್ನು ತುಳಿದು ಸಾಯಿಸಿದೆ.
ರಾಮನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ಮಿತಿಮೀರಿದೆ. ತೋಟದ ಮೇಲೆ ದಾಳಿ ಮಾಡಿದ ಕಾಡಾನೆ ತೋಟದ ಕಾವಲುಗಾರರನ್ನು ತುಳಿದು ಸಾಯಿಸಿದೆ. ಈ ಘಟನೆ ಬಳಿಕ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಕೆಲ ವರ್ಷಗಳಿಂದ ನಿರಂತರವಾಗಿರುವ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಕಾವೇರಿ ವನ್ಯಜೀವಿ ವಲಯದ ಮುತ್ತತ್ತಿ ಅರಣ್ಯ ಪ್ರದೇಶದಿಂದ ವಲಸೆ ಬಂದಿರುವ ಸುಮಾರು 25 ಆನೆಗಳ ಹಿಂಡು, ಚಿಕ್ಕ ಚಿಕ್ಕ ಗುಂಪುಗಳಾಗಿ ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು, ರೈತರ ಜಮೀನುಗಳ ಮೇಲೆ ದಾಳಿಯಿಟ್ಟು ನಿರಂತರವಾಗಿ ಉಪಟಳ ನೀಡುತ್ತಿವೆ. ಅರಣ್ಯ ಸಿಬ್ಬಂದಿ ಹಲವು ಬಾರಿ ಆನೆ ಓಡಿಸುವ ಕಾರ್ಯಚರಣೆ ನಡೆಸಿದರು ಪ್ರಯೋಜನವಾಗುತ್ತಿಲ್ಲ.
ಜಮೀನುಗಳ ಮೇಲೆ ದಾಳಿ ಮಾಡುವ ಕಾಡಾನೆಗಳ ಹಿಂಡು ಬೆಳೆ ನಾಶ ಮಾಡುತ್ತಿವೆ. ಆದರೆ ಇದೆ ತಂಡದ ಒಂಟಿ ಸಲಗ ಜನರ ಮೇಲೆ ದಾಳಿ ಮಾಡುವ ಮೂಲಕ ರೈತರಲ್ಲಿ ಆತಂಕ ಮೂಡಿಸಿದೆ. ಕಬ್ಬಾಳು ಅರಣ್ಯ ಪ್ರದೇಶ ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಗಳಲ್ಲಿ ಜನರ ಮೇಲೆ ನಡೆದ ಬಹುತೇಕ ದಾಳಿಗಳನ್ನು ಇದೇ ಪುಂಡಾನೆ ಮಾಡಿದೆ.
ಪ್ರತಿ ಬಾರಿ ಒಂಟಿ ಸಲಗದ ದಾಳಿಗೆ ಜನರು ಬಲಿಯಾದಾಗ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ನೀಡಿ ಸುಮ್ಮನಾಗುತ್ತಿದೆ. ಆನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ನಮಗೆ ಹಣದ ಪರಿಹಾರ ಬೇಡ, ಕಾಡನೆಗೆ ದಾಳಿಗೆ ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಸರ್ಕಾರ ಹಾಗೂ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ರಾಮನಗರ ಹಾಗೂ ಚನ್ನಪಟ್ಟಣದ ವ್ಯಾಪ್ತಿಯ ಗಡಿಗ್ರಾಮಗಳಲ್ಲಿ ಆನೆಗಳ ಹಾವಳಿ ವಿಪರೀತವಾಗಿದ್ದು, ಆನೆಗಳ ದಾಳಿಯಿಂದ ರೈತರು ಹೈರಾಣಾಗಿದ್ದಾರೆ. ಅಲ್ಲದೇ ಬಿ.ವಿ.ಹಳ್ಳಿ ಬಳಿ ಮಹಿಳೆಯೊಬ್ಬರು ಆನೆ ದಾಳಿಗೆ ಬಲಿಯಾದಾಗ, ಅರಣ್ಯ ಇಲಾಖೆ ಸಾಕಾನೆಗಳನ್ನು ಬಳಸಿ ಆನೆ ಸೆರೆ ಕಾರ್ಯಾಚರಣೆಗೆ ಸುಮಾರು 25 ಲಕ್ಷ ರೂ. ವೆಚ್ಚ ಮಾಡಿ ಎರಡು ಪುಂಡಾನೆಯನ್ನು ಸೆರೆ ಹಿಡಿದು ಬೇರೆ ಕಾಡಿಗೆ ಸ್ಥಳಾಂತರ ಮಾಡಿತ್ತು.
ಐದು ಸಾಕಾನೆ ಬಳಸಿಕೊಂಡು ಆಗಸ್ಟ್ 13 ರಂದು ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ಆರಂಭಿಸಿದ ಮರುದಿನವೇ (ಆ.14 ರಂದು) ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ಕೆಂಪಿಕಟ್ಟೇ ಬಳಿ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಸೆರೆ ಹಿಡಿದ ಪುಂಡಾನೆಯನ್ನು ಮಲೆಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಬಿಡಲಾಗಿತ್ತು.
ಆದರೆ, ಮಲೆಮಹದೇಶ್ವರ ಬೆಟ್ಟದಿಂದ ಆಚೆ ತಮಿಳುನಾಡು ಗಡಿಪ್ರದೇಶದ ಅರಣ್ಯಕ್ಕೆ ಬಿಡಲಾಗಿದ್ದ ಪುಂಡಾನೆ ಸುಮಾರು 150 ಕಿಲೋ ಮೀಟರ್ ದೂರದಿಂದ ಮತ್ತೆ ಜಿಲ್ಲೆಯ ಅರಣ್ಯಕ್ಕೆ ಮರಳಿದ್ದು, ಇದೀಗ ಅದರ ಉಪಟಳ ಮತ್ತೆ ಶುರುವಾಗಿದೆ. ತಮಿಳುನಾಡು ಗಡಿ ಪ್ರದೇಶದ ಅರಣ್ಯಕ್ಕೆ ಆನೆಯನ್ನು ಬಿಟ್ಟ ಮರುದಿನದಲ್ಲೇ ಪುಂಡಾನೆ ತನ್ನ ಪ್ರಯಾಣ ಪ್ರಾರಂಭಿಸಿ ಕೆಲ ತಿಂಗಳ ಹಿಂದೆ ಸಾತನೂರಿನ ಮೂಲಕ ತೆಂಗಿನಕಲ್ಲು ಅರಣ್ಯ ಪ್ರವೇಶಿಸಿ ತನ್ನ ಉಪಟಳ ಮುಂದುವರಿಸಿದೆ.
ಇನ್ನಾದರೂ ಈ ಆನೆಯನ್ನು ಸೆರೆ ಹಿಡಿದು ಪಳಗಿಸಿ ಇಲ್ಲ ನಮ್ಮ ಜೀವಕ್ಕೆ ರಕ್ಷಣೆ ಕೊಡಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.