ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಲನಚಿತ್ರ ಸಹಾಯಕ ನಿರ್ದೇಶಕ ಎಸ್.ರಾಜೇಶ್ ಕೋರ್ಟ್‌ಗೆ ಗೈರಾಗಿದ್ದರಿಂದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಸೋಮವಾರ ಜಾಮೀನು ರಹಿತ ವಾರಂಟ್(NBW) ನೀಡಿ ನವೆಂಬರ್ 10ಕ್ಕೆ ಮುಂದೂಡಿದೆ.
ಸಿನಿಮಾ ವಿತರಕ, ಬಿಸಿನಸ್, ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡು ತನ್ನ ಸ್ನೇಹಿತರ ಮೂಲಕ ದೇವರಾಜು ಎಂಬುವರಿಗೆ ಪರಿಚಯವಾದ ಆರೋಪಿ ರಾಜೇಶ್ ಗೃಹೋಪಯೋಗಿ ವಸ್ತುಗಳ ಮೇಲೆ ಬಂಡವಾಳ ಹೂಡಬೇಕು ಅದಕ್ಕಾಗಿ ಹಣದ ಅವಶ್ಯವಿದೆ ಎಂದು ಹೇಳಿ ಸುಮಾರು 4 ವರ್ಷದ ಹಿಂದೆ 4.5 ಲಕ್ಷ ರೂಪಾಯಿಯನ್ನು ಪಡೆದು ಬಳಿಕ ಕೊಟ್ಟ ಹಣವನ್ನು ವಾಪಸ್ ಕೊಟ್ಟಿಲ್ಲ.
ಆ ಬಳಿಕ 2022ರ ಮೇನಲ್ಲಿ 3.75 ಲಕ್ಷ ರೂಪಾಯಿ ಚೆಕ್ ನೀಡಿದ್ದ ಆರೋಪಿ. ಆ ಚೆಕ್‌ಅನ್ನು ಬ್ಯಾಂಕ್‌ಗೆ ಹಾಕಿದಾಗ ಅಕೌಂಟ್‌ನಲ್ಲಿ ಸಾಕಷ್ಟು ಹಣವಿಲ್ಲ ಎಂದು ಚೆಕ್ ಬೌನ್ಸ್ ಆಯಿತು. ಹೀಗಾಗಿ ಜೂನ್ 2022ರಲ್ಲಿ ದೇವರಾಜು ಕೋರ್ಟ್ ಮೊರೆ ಹೋದರು. ಅಂದಿನಿಂದ ಈವರೆಗೂ ತಲೆ ಮರೆಸಿಕೊಂಡು ಕೋರ್ಟ್‌ಗೂ ಹಾಜರಾಗದೆ ಇತ್ತ ಕೊಟ್ಟ ಹಣವನ್ನು ವಾಪಸ್ ಕೊಡದೆ ಓಡಾಡಿಕೊಂಡಿದ್ದಾನೆ. ಹೀಗಾಗಿ ಆರೋಪಿ ರಾಜೇಶ್‌ಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ ಸಿಟಿ ಸಿವಿಲ್ ಕೋರ್ಟ್.
ಆರೋಪಿ ರಾಜೇಶ್ ಇದೇ ರೀತಿ ಹಲವಾರು ಜನರ ಬಳಿ ಸುಳ್ಳು ಹೇಳಿ ಸಾಲದ ರೂಪದಲ್ಲಿ ಹಣ ಪಡೆದು ವಂಚನೆ ಎಸಗಿರುವ ಬಗ್ಗೆಯೂ ಆರೋಪವಿದೆ. ಈತ ತಮ್ಮ ಸ್ನೇಹಿತರು ಮತ್ತು ಸ್ನೇಹಿತರ ಗೆಳೆಯರ ಬಳಿಯೂ ಸಾಲ ಪಡೆದು ಮರಳಿಸಿಲ್ಲ ಎಂಬ ಆರೋಪವಿದೆ.
ಒಟ್ಟಾರೆ ಸಿನಿಮಾ, ವ್ಯಾಪಾರ ಇತ್ಯಾದಿ ಕೆಲಸ ಮಾಡುವುದಾಗಿ ನಂಬಿಸಿ ಸುಮಾರು 75 ಲಕ್ಷ ರೂಪಾಯಿವರೆಗೂ ಸ್ನೇಹಿತರಿಂದ ಪಡೆದು ವಂಚಿಸಿರುವ ಆರೋಪ ರಾಜೇಶ್ ಮೇಲೆ ಇದೆ. ಸದ್ಯ ಸಿಟಿ ಸಿವಿಲ್ ನ್ಯಾಯಾಲಯ NBW ನೀಡಿದ್ದು, ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.