ಬೆಳಗಾವಿ: ಇಲ್ಲಿನ ಸುವರ್ಣ ಸೌಧದ ಮುಂಭಾಗ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಸಾರ್ವಜನಿಕರೊಬ್ಬರು ಬೆಂಬಲ ನೀಡಿ ಉಪವಾಸ ಕುಳಿತು ಅಸ್ವಸ್ಥರಾಗಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಇದೇ ಡಿ.19ರಂದು ಆರಂಭವಾದ ಉಪವಾಸ ಸತ್ಯಾಗ್ರಹದ ದಿನದಿಂದಲೇ ಸಾರಿಗೆ ನೌಕರರ ಪರವಾಗಿ ಅನ್ನ ಆಹಾರ ಬಿಟ್ಟು ಉಪವಾಸ ಕುಳಿತಿದ್ದ ಸೇಡಂ ಮೂಲಕದ ಬಸವರಾಜು ಎಂಬುವರೆ ನೌಕರರ ಪರ ತಮ್ಮ ಪ್ರಾಣದ ಹಂಗುತೊರೆದು ಉಪವಾಸ ಕುಳಿತಿದ್ದರು.
ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದಿರುವ ಬಸವರಾಜು ಅವರು ನನ್ನ ಪ್ರಾಣಹೋದರೂ ಸರಿಯೇ ನೌಕರರ ನ್ಯಾಯಯುತವಾದ ಬೇಡಿಕೆ ಈಡೇರಿಸುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹೀಗಾಗಿ ಡಿ.19ರಿಂದ ಸಾರಿಗೆ ನೌಕರರು ಮಾಡುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ತಾವು ಉಪವಾಸ ಕುಳಿತಿದ್ದರು. ಕಳೆದ ನಾಲ್ಕು ದಿನದಿಂದ ಆಹಾರ ಸೇವಿಸದೆ ಇದ್ದಿದ್ದರಿಂದ ಇಂದು ಮಧ್ಯಾಹ್ನ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಅವರನ್ನು ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಐಸಿಯೂನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯ ಈಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಸಾರಿಗೆ ನೌಕರರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಸಂಸ್ಥೆಗೆ ಸಂಬಂಧಪಡದ ವ್ಯಕ್ತಿಯೊಬ್ಬರು ತಮ್ಮ ಪ್ರಾಣದ ಹಂಗನ್ನು ತೊರೆದು ಉಪವಾಸ ಕುಳಿತಿದ್ದಾರೆ. ಇವರ ಈ ಹೋರಾಟ ಇತರ ನೌಕರರಿಗೆ ಮಾದರಿಯಾಗಿದೆ. ಹೀಗಾಗಿ ಉಳಿದ ನೌಕರರು ತಮ್ಮ ಸ್ವಪ್ರತಿಷ್ಠೆಯನ್ನು ಬದಿಗೊತ್ತಿ ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ನೀವೇ ಸತ್ಯಾಗ್ರಹವನ್ನು ಬೆಂಬಲಿಸಬೇಕಿದೆ.