ಕಲಬುರಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ತೆರವಾಗಿರುವ ಹುದ್ದೆಗಳ ಸದ್ಯಕ್ಕೆ 9 ಸಾವಿರ ಹುದ್ದೆಗಳ ನೇಮಕ ಮಾಡಿಕೊಳ್ಳುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದು ಸಾರಿಗೆ ಸಚಿವರ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಗುರುವಾರ (ಜ.25) ಕೆಕೆಆರ್‌ಡಿಬಿಯಡಿ 20 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ ಗೊಂಡ ಕಲಬುರಗಿ ನಗರ ಸಾರಿಗೆ ಬಸ್ ನಿಲ್ದಾಣದ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನಿವೇಶನ ನೀಡಿದಲ್ಲಿ ಸ್ಯಾಟ್‍ಲೈಟ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.
ಇನ್ನು ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸುಮಾರು 13800 ಹುದ್ದೆಗಳು ಖಾಲಿ ಇದ್ದು, ಮಾರ್ಚ್ ಅಂತ್ಯದೊಳಗೆ ಅವುಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. 9 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಈಗಾಗಲೇ ನೇಮಕಾತಿ ಚಾಲ್ತಿಯಲ್ಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ದಲ್ಲಿ 1688 ಹುದ್ದೆಗಳು ಸೇರಿವೆ ಎಂದರು.
ಶಕ್ತಿ ಯೋಜನೆ ಜಾರಿ ಮುನ್ನ ರಾಜ್ಯದಲ್ಲಿ ಪ್ರತಿ ದಿನ 84 ಲಕ್ಷ ಜನ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ನಂತರ 1.10 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಕುರಿತು ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ಈಗ ಯೋಜನೆ ಜಾರಿಯಾಗಿದೆ. ಕಳೆದ 8 ತಿಂಗಳ ಅವಧಿಯಲ್ಲಿ 139 ಕೋಟಿ ಜನ ಸಂಚಾರ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇದಾಗಿದೆ ಎಂದು ಸಂತಸ ಹಂಚಿಕೊಂಡರು.
ಕೆಕೆಆರ್‌ಟಿಸಿ ಸಂಸ್ಥೆಗೆ ಈಗಾಗಲೆ 630 ಬಸ್ ನೀಡಲಾಗಿದೆ. ಮುಂದಿನ ದಿನದಲ್ಲಿ ಮತ್ತೆ 485 ಬಸ್ ನೀಡಲಾಗುವುದು. ರಾಜ್ಯದಲ್ಲಿ 2016ರ ನಂತರ 13,888 ಜನ ನಿವೃತ್ತಿಯಾಗಿದ್ದು, ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆದಿರಲಿಲ್ಲ. ನಮ್ಮ ಸರ್ಕಾರ ಬಂದ ಕೂಡಲೆ ನೇಮಕಾತಿಗೆ ಚಾಲನೆ ನೀಡಿದ್ದೇವೆ ಎಂದರು.
ಸಾರಿಗೆ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ 1 ಕೋಟಿ ರೂ. ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೆ ಮಾದರಿಯಾಗಿದೆ. ಒಂದೆಡೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಬೇಕು. ಇನ್ನೊಂದೆಡೆ ನೌಕರರ ಹಿತ ಕಾಯುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಇತ್ತೀಚೆಗೆ ನಡೆದ ಮಂಡಳಿ ಸಭೆಯಲ್ಲಿ ಈಶಾನ್ಯ ಭಾಗದ ಜಿಲ್ಲೆಗಳು ಬೆಂಗಳೂರಿಗೆ 600 ಕಿ.ಮೀ. ದೂರದಲ್ಲಿರುವ ಕಾರಣ ಮತ್ತು ಓಡಾಟ ಹೆಚ್ಚಿರುವುದರಿಂದ ವೋಲ್ವೋ, ಎ.ಸಿ. ಬಸ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓಡಿಸುವಂತೆ ಎಂಡಿ ಅವರಿಗೆ ಸೂಚನೆ ನೀಡಿದ್ದೇನೆ. ಪರಿಣಾಮ ಈಗ ಎ.ಸಿ. ನಾನ್ ಎ.ಸಿ. ಸ್ಲೀಪರ್ ಬಸ್‍ಗಳಿಗೆ ಚಾಲನೆ ನೀಡಿದ್ದೇವೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಹಿಂದೆ ತಾವು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾಗಿದ್ದಾಗ 5 ಕೋಟಿ ರೂ. ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಿದೆ. ಮುಂದೆ ಮಂಡಳಿಯಿಂದ ಉಳಿದ 15 ಕೋಟಿ ರೂ. ನೀಡಿ ಸುಸಜ್ಜಿತ ಬಸ್ ನಿಲ್ದಾಣ ಪೂರ್ಣಗೊಳಿಸಲಾಗಿದೆ. ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ನಿರ್ಮಾಣದಿಂದ ವಿವಿಧ ಗ್ರಾಮೀಣ ಭಾಗದಿಂದ ನಗರಕ್ಕೆ ಓಡಾಡುವ ಹಳ್ಳಿ ಜನರಿಗೆ ತುಂಬಾ ಅನುಕೂಲವಾಗಿದೆ ಎಂದರು.
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾತನಾಡಿ, ಮಂಡಳಿಯಿಂದಲೆ 20 ಕೋಟಿ ರೂ. ವೆಚ್ಚದಲಿತೀ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಕೆ.ಕೆ.ಆರ್.ಟಿ.ಸಿ ಸಂಸ್ಥೆಗೆ 120 ಬಸ್ ಖರೀದಿಗೆ ಮಂಡಳಿಯಿಂದ 50 ಕೋಟಿ ರೂ. ನೀಡಲಾಗುವುದು. ಇತ್ತೀಚೆಗೆ ಮಂಡಳಿಯಲ್ಲಿ ಒಂದು ನಿರ್ಣಯ ತೆಗೆದುಕೊಂಡಿದ್ದು ಶೇ.1/3 ಭಾಗ ಮಂಡಳಿ ಅನುದಾನ ನೀಡಿದರೆ, ಉಳಿದ 2/3 ಭಾಗ ಸಂಬಂಧಪಟ್ಟ ಇಲಾಖೆ ನೀಡಬೇಕು. ಹೀಗಾಗಿ ಬಸ್ ಖರೀದಿಗೆ ಉಳಿದ ಹಣ ಸರ್ಕಾರ ನೀಡಬೇಕೆಂದು ಸಚಿವ ರಾಮಲಿಂಗಾರೆಡ್ಡಿಗೆ ಅವರಿಗೆ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ ಕಲಬುರಗಿ ಮಹಾನಗರ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿನಿತ್ಯ 1,200 ಬಸ್ ನಿರಂತರ ಕಾರ್ಯಾಚರಣೆ ಮಾಡುತ್ತಿವೆ. ಪರಿಣಾಮ ನಗರದಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಪರಿಸರ ಮಾಲಿನ್ಯ ಹೆಚ್ಚಿದೆ.
ಹೀಗಾಗಿ ಇದನ್ನು ತಡೆಯಲು ಕಲಬುರಗಿ ನಗರದ ನಾಲ್ಕು ರಿಂಗ್ ರಸ್ತೆಯಲ್ಲಿ ಅಂದರೆ ಜೇವರ್ಗಿ ರಸ್ತೆ, ಹುಮನಾಬಾದ ರಸ್ತೆ, ಆಳಂದ ರಸ್ತೆ, ಸೇಡಂ ರಸ್ತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಚಿನದ ಪದಕ ವಿತರಣೆ: ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 6 ಜನರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಮತ್ತು ಕಲಬುರಗಿ ವಿಭಾಗ-1 ಹಾಗೂ 2ರ 121 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಭಾಗವಾಗಿ ಸಾಂಕೇತಿಕವಾಗಿ ಇಬ್ಬರಿಗೆ ಬೆಳ್ಳಿ ಪದಕ ವಿತರಿಸಲಾಯಿತು.
ಇದಲ್ಲದೆ ಎಜಾಜ್ ಅಹ್ಮದ್, ರೇವಣಸಿದ್ದಪ್ಪ ಅವರಿಗೆ ಅನುಕಂಪದ ನೇಮಕಾತಿ ಅದೇಶ ಪತ್ರ ನೀಡಲಾಯಿತು. ನಿಗಮದಲ್ಲಿ ಸೇವಾ ಅವಧಿಯಲ್ಲಿ ಮೃತಪಟ್ಟ 8 ಜನ ಅಧಿಕಾರಿ-ಸಿಬ್ಬಂದಿಗಳ ಅವಲಂಭಿತರಿಗೆ ತಲಾ 10 ಲಕ್ಷ ರೂ.ಗಳಂತೆ ಒಟ್ಟು 80 ಲಕ್ಷ ರೂ. ಗಳ ಆಂತರಿಕ ಗುಂಪು ವಿಮಾ ಪರಿಹಾರದ ಚೆಕ್‍ಗಳನ್ನು ಸಹ ವಿತರಣೆ ಮಾಡಲಾಯಿತು.
ಕಲ್ಯಾಣ ರಥಕ್ಕೆ ಚಾಲನೆ: ಸಮಾರಂಭಕ್ಕೂ ಮುನ್ನ ಸಚಿವ ಅವರು ಕಲ್ಯಾಣ ರಥ (ಎ.ಸಿ. ಸ್ಲೀಪರ್) ಮತ್ತು ಅಮೋಘವರ್ಷ (ನಾನ್ ಎ.ಸಿ. ಸ್ಲೀಪರ್) ಬಸ್ಸುಗಳ ಲೋಕಾರ್ಪಣೆ ಮಾಡಿದರು.
ಸಮಾರಂಭದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ, ಶಾಸಕರಾದ ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಕೆ.ಕೆ.ಆರ್.ಟಿ.ಸಿ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ದೇವರಾಜ.
ಸಿ.ಎಂ.ಇ ಸಂತೋಷಕುಮಾರ ಗೊಗೋರೆ, ಮುಖ್ಯ ಭದ್ರತಾ ಮತ್ತು ವಿಜಿಲೆನ್ಸ್ ಅಧಿಕಾರಿ ಆನಂದ ಬಂದರಕಳ್ಳಿ, ಮುಖ್ಯ ಲೆಕ್ಕಾಧಿಕಾರಿ ಬಸವರಾಜ ಬೆಳಗಾವಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಈಶ್ವರ ಹೊಸಮನಿ, ಗಂಗಾಧರ, ಡಿ.ಸಿ.ಸಿ. ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇತರೆ ಅಧಿಕಾರಿಗಳು, ಸಾರಿಗೆ ಸಿಬ್ಬಂದಿಗಳು ಇದ್ದರು. ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.