Search By Date & Category

CrimeNEWSನಮ್ಮಜಿಲ್ಲೆ

ಆಸ್ತಿ ಕಬಳಿಸಲು ಗ್ರಾಪಂ ಸದಸ್ಯನಿಂದ ಸಂಚು, ಕೊಲೆ ಬೆದರಿಕೆ, ರಕ್ಷಣೆಗೆ ನಿಲ್ಲದ ಪೊಲೀಸರು

ಪಿರಿಯಾಪಟ್ಟಣ ತಾಲೂಕಿನ ತಾಯಿ - ಮಗಳ ಆರೋಪ

ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ಗಂಡನಿಗೆ ಪಿತ್ರಾರ್ಜಿತವಾಗಿ ಸೇರಬೇಕಾದ ಅಸ್ತಿಯನ್ನು ಕಬಳಿಸಲು ರಾಜಕೀಯ ಪ್ರಭಾವ ಬೀರಿ ಚುನಾವಣಾ ಗುರುತಿನ ಚೀಟಿ ರದ್ದುಗೊಳಿಸಿ ಹಾಗೂ ಆಸ್ತಿಯ ದಾಖಲೆಗಳನ್ನು ಪೋರ್ಜರಿ ಮಾಡಿ ಆಸ್ತಿಯನ್ನು ಕಬಳಿಸಲು ತನ್ನ ಭಾವ ಸಂಚುರೂಪಿಸಿದ್ದಾನೆ ಚೌಕೂರು ಗ್ರಾಮದ ಲೇ.ಪುಟ್ಟಸ್ವಾಮಿಯವರ ಪತ್ನಿ ಕುಮಾರಿ ಆರೋಪಿಸಿದ್ದಾರೆ.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚೌಕೂರು ಗ್ರಾಮದ ದಿವಂಗತ ಪುಟ್ಟಸ್ವಾಮಿಯವರ ಪತ್ನಿ ಕುಮಾರಿ ಮಾತನಾಡಿ, ತಾಲೂಕಿನ ಬೆಕ್ಯ ಗ್ರಾಮದ ವೆಂಕಟೇಗೌಡ ಎಂಬುವರ ಮಗ ಪುಟ್ಟಸ್ವಾಮಿ ಎಂಬುವರನ್ನು ವಿವಾಹ ವಾಗಿದ್ದೆ. ನನ್ನ ಗಂಡ ಬಾಲ್ಯದಿಂದಲೇ ಮಾತು ಬಾರದ ಮೂಗ ಹಾಗೂ ಕಿವುಡನಾಗಿದ್ದು, ನನಗೆ ಬಿ.ಪಿ.ಪ್ರಿಯಾಂಕಾ ಮತ್ತು ದಿಲೀಪ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಮಗಳು ಪ್ರಿಯಾಂಕಳನ್ನು ಚೌಕೂರು ಗ್ರಾಮದ ರಘು ಎಂಬುವರಿಗೆ ವಿವಾಹ ಮಾಡಿಕೊಟ್ಟಿದ್ದೇವೆ. ಈ ನಡುವೆ ಐದು ವರ್ಷಗಳ ಹಿಂದೆ ನನ್ನ ಗಂಡ ಪುಟ್ಟಸ್ವಾಮಿಯವರು ನಿಧನರಾಗಿದ್ದಾರೆ. ಹೀಗಾಗಿ ನನ್ನ ಭಾವ ಗ್ರಾಪಂ ಸದಸ್ಯ ಹಾಗೂ ಜೆಡಿಸ್ ಮುಖಂಡ ಕಾಳೇಗೌಡ ಹಾಗೂ ಆತನ ಮಗ ನವೀನ್ ಕುಮಾರ್ ಎಂಬುವವರು ನನ್ನ ಗಂಡನಿಗೆ ಸೇರಬೇಕಾದ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಲು ಸಂಚುರೂಪಿಸಿ ತನ್ನ ರಾಜಕೀಯ ಪ್ರಭಾವ ಬೀರಿ ನನ್ನ ವೋಟರ್‌ ಗುರುತಿನ ಚೀಟಿ ರದ್ದುಗೊಳಿಸಿ ನನ್ನ ಗಂಡನಿಗೆ ನ್ಯಾಯ ಬದ್ಧವಾಗಿ ಸೇರಬೇಕಾದ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಲು ಹೊಂಚುಕಾಕುತ್ತಿದ್ದಾರೆ ಎಂದು ಆರೋಪಿಸಿದರು.

ಹೀಗಾಗಿ ನಾವು ನಮ್ಮ ಗಂಡನ ವಿಭಾಗದ ಆಸ್ತಿಯನ್ನು ಕೊಡಿ ಎಂದು ಬೇಡಿಕೊಂಡರೂ ನೀಡುತ್ತಿಲ್ಲ. ಹಿಂದೆ ನಾವು ಅನುಭವದಲ್ಲಿದ್ದ ಭೂಮಿಯಿಂದಲೂ ನಮ್ಮನ್ನು ಹೊರ ಹಾಕಿದ್ದಾರೆ. ಇದನ್ನು ಪಡೆಯಲು ಕಾನೂನಿನ ಪ್ರಕಾರ ಅರ್ಜಿಸಲ್ಲಿಸಿ ನ್ಯಾಯವನ್ನು ಪಡೆಯಲು ಕಾನೂನು ಹೋರಾಟಕ್ಕೆ ಹೋಗಿದ್ದ ನನ್ನ ಅಳಿಯ ರಘು ಮತ್ತು ಆತನ ಸ್ನೇಹಿತ ಅಜಯ್ ಎಂಬುವವರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ರಾಜಕೀಯ ಒತ್ತಡಕ್ಕೆಸಿಲುಕಿ ಪೊಲೀಸರು ಆರೋಪಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿ ಬಂಧಿಸುವ ಕೆಲಸ ಮಾಡುತ್ತಿಲ್ಲ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಪಿರಿಯಾಪಟ್ಟಣ ಸಿಪಿಐ ಶ್ರೀಧರ್ ಅವರನ್ನು ಒತ್ತಾಯಿಸಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಬಿ.ವಿ.ಕಾಳೇಗೌಡ ಶಾಸಕ ಕೆ.ಮಹದೇವ್ ಅವರ ಆಪ್ತರಾಗಿರುವ ಕಾರಣಕ್ಕೆ ಇಲ್ಲಿವರೆಗೂ ಸಹ ಬಂಧಿಸಿಲ್ಲ ಎಂದು ಆರೋಪಿಸಿದರು.

ಪ್ರಿಯಾಂಕ ಮಾತನಾಡಿ, ತನ್ನ ದೊಡ್ಡಪ್ಪ ಕಾಳೇಗೌಡ ಅವರ ಮಗ ನವೀನ್‌ ಕುಮಾರ್ ನನ್ನ ಪತಿ ರಘು ಅವರ ಮೇಲೆ ಹಲ್ಲೆಮಾಡಿ ಪ್ರಾಣ ಬೆದರಿಕೆ ಹಾಕಿದ್ದರೂ, ಆದರೆ ಶಾಸಕರ ಕಪಿಮುಷ್ಟಿಯಲ್ಲಿರುವ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಯಾವುದೇ ರೀತಿ ನ್ಯಾಯ ಮತ್ತು ರಕ್ಷಣೆ ದೊರೆಯದಂತಾಗಿದೆ.

ನನ್ನ ತಾಯಿಯ ಆಧಾರ್ ಕಾರ್ಡ್ ಬೆಕ್ಯ ಗ್ರಾಮದ ವಿಳಾಸದಲ್ಲಿದ್ದು ದಾಖಲೆಗಳನ್ನು ನಾಶ ಮಾಡಿ ಮತದಾರರ ಚೀಟಿಯನ್ನು ನನ್ನ ದೊಡ್ಡಪ್ಪ ಕಾಳೇಗೌಡ ಅವರೇ ಡಿಲೀಟ್ ಮಾಡಿಸಿದ್ದಾರೆ. ಆದ್ದರಿಂದ ಮೇಲಧಿಕಾರಿಗಳು ಮತ್ತು ಪ್ರಗತಿಪರ ಸಂಘಟನೆಗಳು ಈ ಕುಟುಂಬದಿಂದ ಆಗುತ್ತಿರುವ ಅನ್ಯಾಯದಿಂದ ನಮಗೆ ನ್ಯಾಯ ಕೊಡಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಘು, ಚೆನ್ನಪ್ಪ, ಸಿ.ಎಸ್. ರವಿ ಇದ್ದರು.

Leave a Reply

error: Content is protected !!