ಕೊರೊನಾ ಲಾಕ್‌ಡೌನ್ ಸಂಕಷ್ಟ: 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಬಿಎಸ್‌ವೈ
ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಬಡ ಮಧಯಮ ವರ್ಗದ ಬಹುತೇಕ ಜನರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇನ್ನು ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಮೇ 23ರಂದು ನಿರ್ಧಾರಿಸಿ ಘೋಷಿಸುವುದಾಗಿಯೂ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಂದು ತಿಂಗಳಿಂದ ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್‌ನಿಂದಾಗಿ ವ್ಯಾಪಾರ-ವಹಿವಾಟುಗಳು ಸ್ಥಗಿತಗೊಂಡಿರುವುದರಿಂದ ಅನೇಕ ಜನರು ಪರದಾಡುತ್ತಿದ್ದಾರೆ. ಹೀಗಾಗಿ, ಸರ್ಕಾರ ಆದಷ್ಟು ಬೇಗ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಸಿಎಂ ಅಂತಿಮವಾಗಿ ಇಂದು ವಿಧಾನಸೌಧಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದ ಬಹುತೇಕ ಎಲ್ಲ ಶ್ರಮಿಕ ವರ್ಗದವರಿಗೆ ಸಹಾಯಧನ ಘೋಷಿಸಿದ್ದಾರೆ.
ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಕಟ್ಟಡ ಕಾರ್ಮಿಕರಿಗೆ – 490 ಕೋಟಿ ರೂ. ಮೀಸಲಿಡಲಾಗಿದೆ. ಅಸಂಘಟಿತ ಕಾರ್ಮಿಕರಿಗೆ- 61 ಕೋಟಿ ರೂ. ರಸ್ತೆ ಬದಿ ವ್ಯಾಪಾರಿಗಳಿಗೆ 2 ಸಾವಿರ ರೂಪಾಯಿಯಂತೆ ಒಟ್ಟು 45 ಕೋಟಿ ರೂ. ಕಲಾವಿದರು, ಕಲಾತಂಡಗಳಿಗೆ ತಲಾ 2,000 ರೂ. ಹಣ್ಣು, ತರಕಾರಿ ಬೆಳೆಗಾರರಿಗೆ 10 ಸಾವಿರ ರೂ. ಸಹಾಯ ಧನ, ಬಿಬಿಎಂಪಿ, ನಗರಾಭಿವೃದ್ಧಿ ಅಡಿಯಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ 6 ಲಕ್ಷ ಜನರಿಗೆ ಉಚಿತವಾಗಿ ಊಟ ನೀಡಲಾಗುತ್ತಿದೆ. ಇದಕ್ಕೆ 25 ಕೋಟಿ ರೂ. ಖರ್ಚು ಆಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.
ಲೈನ್ಮ್ಯಾನ್, ಗ್ಯಾಸ್ ಸಿಲಿಂಡರ್ ಸಪ್ಲೆ ಮಾಡುವವರು, ಶಿಕ್ಷಕರನ್ನು ಫ್ರಂಟ್ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿ, ಉಚಿತ ಲಸಿಕೆ ನೀಡಲಾಗುವುದು. ಆಟೋ ಚಾಲಕರಿಗೆ 3 ಸಾವಿರ ರೂ. ಸಹಾಯಧನ ನೀಡಲು ನಿರ್ಧರಿಸಲಾಗಿದೆ. 16,100 ಜನರಿಗೆ ಸಹಾಯಧನಕ್ಕೆ 4 ಕೋಟಿ ರೂ. ಆಗಲಿದೆ ಎಂದು ಹೇಳಿದರು.
ಕೊರೊನಾ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ 3 ದಿನಗಳಲ್ಲಿ 2500 ವೈದ್ಯರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು, ಈ ಮೂರು ತಿಂಗಳ ಅವಧಿಯಲ್ಲಿ ಬರುವ ಸಾಲದ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
ಇನ್ನು ಈಗ ಇರುವ ರೀತಿಯಲ್ಲೇ ಸಮಿ ಲಕ್‌ಡೌನ್ ಮುಂದುರಿಯಲಿದ್ದು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಮೇ 24ರವರೆಗೆ ಇರುವುದರಿಂದ ಮುಂದಿನ ದಿನಗಳಲ್ಲಿ ಅಂದರೆ ಮೇ 24ರ ನಂತರ ಲಾಕ್‌ಡೌನ್ ಮಾಡುವ ಬಗ್ಗೆ ಮೇ 23ರಂದು ಸಿವ ಸಂಪುಟ ಮತ್ತು ಅಧಿಕಾರಿಗಳ ಸಭೆ ಕರೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಸಿಎಂ ವಿವರಿಸಿದರು.