
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರ ಕರ್ತವ್ಯ ನಿಷ್ಠೆಗೆ ಪ್ರಯಾಣಿಕರಿಂದ ಬಂದ ಪ್ರಶಂಸೆ ನೋಡಿ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಶಂಸನ ಪತ್ರನೀಡಿ ಗೌರವಿಸಿದ್ದಾರೆ.
ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಆರ್.ಸೈಯದ್ ಆಸಿಫ್ ಅವರು ಇತ್ತೀಚಿಗೆ ಕೆಂಪೇಗೌಡ ಬಸ್ ನಿಲ್ದಾಣ (ಕೆಬಿಎಸ್ 3A/75) ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪ್ರಯಾಣಿಕರೊಬ್ಬರು ಏರು ಧ್ವನಿಯಲ್ಲಿ ಮೊಬೈಲ್ ಸಂಗೀತ ಕೇಳುತ್ತಿದ್ದರು.
ಇದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿರುವುದನ್ನು ಅರಿತ ನಿರ್ವಾಹಕರು ಕೂಡಲೇ ಅವರ ಬಳಿ ಹೋಗಿ ನೋಡಿ ತಾವು ಫೋನ್‌ನಲ್ಲಿ ಸಂಗೀತ ಆಲಿಸುವುದು ತಪ್ಪಿಲ್ಲ. ಆದರೆ ನೀವು ಸಂಗೀತ ಆಲಿಸುವಾಗ ಬೇರೆಯರಿಗೆ ಕಿರಿಕಿರಿ ಆಗಬಾರದು ಅಲ್ಲವೇ ಎಂದು ಹೇಳಿ ಅವರಿಗೆ ಅರಿವು ಮೂಡಿಸಿದ್ದಾರೆ.
ಜತೆಗೆ ತಾವು ಇಯರ್‌ಫೋನ್ ಬಳಸಿಕೊಂಡು ಹಾಡು ಕೇಳಿದರೆ ನಿಮ್ಮ ಅಕ್ಕಪಕ್ಕದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೂ ಯಾವುದೇ ತೊಂದರೆ ಆಗುವುದಿಲ್ಲ ಅಲ್ಲವೇ ಎಂದು ಹೇಳಿದ್ದಾರೆ.
ಅಲ್ಲದೆ ಲೌಡ್ ಸ್ಪೀಕರ್‌ನಲ್ಲಿ ಹಾಡು ಕೇಳದಂತೆ ಅರಿವು ಮೂಡಿಸಿದ್ದಕ್ಕೆ ನಿರ್ವಾಹಕ ಸೈಯದ್ ಆಸಿಫ್ ಅವರ ನಡೆಯನ್ನು ಪ್ರಯಾಣಿಕರು ಪ್ರಶಂಸಿಸಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅದನ್ನು ಗಮನಿಸಿದ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಆಸಿಫ್ ಅವರ ಕರ್ತವ್ಯ ಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸನ ಪತ್ರ ನೀಡಿ ಶ್ಲಾಘಿಸಿದ್ದಾರೆ.