
ತಿ.ನರಸೀಪುರ: ತಾತನೊಂದಿಗೆ ಕಾವೇರಿ ನದಿ ದಂಡೆಗೆ ಹೋಗಿದ್ದ ವೇಳೆ ನದಿಗಿಳಿದ ಇಬ್ಬರು ಬಾಲಕರು ನೀರಿನಲ್ಲಿ ಈಜಲು ಹೋಗಿ ಮುಳುಗುತ್ತಿದ್ದನ್ನು ಗಮನಿಸಿದ ತಾತ ರಕ್ಷಿಸಲು ಹೋಗಿ ಮೊಮ್ಮಕ್ಕಳೊಂದಿಗೆ ಜಲಸಮಾಧಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ಪಟ್ಟಣದ ತಿರುಮಕೂಡಲು ನಿವಾಸಿ ಚೌಡಯ್ಯ (70) ಮೊಮ್ಮಕ್ಕಳಾದ ಭರತ್(13) ಹಾಗೂ ಧನುಷ್ (10) ನೀರಿನಲ್ಲಿ ಮುಳುಗಿ ಮೃತಪಟ್ಟವರು.
ಕಾವೇರಿ ನದಿ ಬಳಿ ತಾತನೊಂದಿಗೆ ಹೋದ ಈ ಬಾಲಕರು ನೀರಿನಲ್ಲಿ ಈಜಲು ನದಿಗೆ ಇಳಿದಿದ್ದಾರೆ. ಆದರೆ ಈ ವೇಳೆ ನದಿಯ ಆಳಕ್ಕೆ ಹೋಗಿದ್ದು, ಇಬ್ಬರು ಮೇಲೆ ಬರುವುದಕ್ಕೆ ಒದ್ದಾಡುತ್ತಿದ್ದರು, ಇದನ್ನು ಗಮನಿಸಿದ ಅಜ್ಜ ಮೊಮ್ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ರಕ್ಷಣೆ ಮಾಡುವುದಕ್ಕೆ ಹೋಗಿ ಅದು ಸಾಧ್ಯವಾಗದೆ ಮೊಮ್ಮಕ್ಕಳ ಜತೆಗೆ ತಾತನು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ತಿ.ನರಸೀಪುರ ಪೊಲೀಸ್‌ಠಾಣೆಯ ಪೊಲೀಸರು ಮೂವರ ಮೃತದೇಹಗಳನ್ನು ನದಿಯಿಂದ ಹೊರತೆಗೆಸಿ ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಇತ್ತ ಮಕ್ಕಳು ಹಾಗೂ ತಾತನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಈ ಅವಘಡ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.