
ಬೆಂಗಳೂರು: ಕನೌರಿ ಗಡಿಯಲ್ಲಿ (ಹರಿಯಾಣ – ಪಂಜಾಬ್ ಗಡಿ) MSP ಖಾತರಿ ಕಾನೂನಿಗಾಗಿ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ್ ಅವರು ಕಳೆದ 110 ದಿನಗಳಿಂದ ಉಪವಾಸ ಸತ್ಯಾಗ್ರ ಮಾಡುತ್ತಿದ್ದು, ಅದನ್ನು ಇನ್ನಷ್ಟು ತೀವ್ರಗೊಳಿಸಲು ಬೆಂಗಳೂರಿನಲ್ಲಿ ರೈತರ ಮಹತ್ವದ ಸಭೆ ಇಂದು ನಡೆಯಿತು.
SKM ರಾಜಕೀಯೇತರ ಸಂಘಟನೆಯ ರಾಷ್ಟ್ರೀಯ ರೈತ ಮುಖಂಡಗಳ ನಿಯೋಗವು ಬೆಂಗಳೂರಿಗೆ ಭೇಟಿ ನೀಡಿ ಗಾಂಧಿ ಭವನದಲ್ಲಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಮಟ್ಟದ ಸಮಿತಿಯನ್ನು ಭೇಟಿ ಮಾಡಿ ನಡೆಯುತ್ತಿರುವ ರೈತ ಚಳವಳಿಯನ್ನು ಬಲಪಡಿಸುವ ಕಾರ್ಯತಂತ್ರವನ್ನು ರೂಪಿಸಿತು.
ಫೆಬ್ರವರಿ 14 ರಂದು ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ರೈತ ನಿಯೋಗ ಸಭೆಯಲ್ಲಿ ಭಾಗವಹಿಸಲು ಚಂಡೀಗಢಕ್ಕೆ ಹೋಗುವಾಗ ಅಪಘಾತಕ್ಕೀಡಾದ ಕುರುಬೂರು ಶಾಂತಕುಮಾರ್ ಅವರ ಆರೋಗ್ಯವನ್ನು ನಿಯೋಗ ಪರಿಶೀಲಿಸಿತು.
ರೈತ ನಾಯಕ ಕುರುಬೂರು ಶಾಂತಕುಮಾರ್‌ಅವರು ರೈತರಿಗೆ ಭಾವನಾತ್ಮಕ ಸಂದೇಶವನ್ನು ನೀಡಿ “ನೀವು ನನ್ನ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ ಮತ್ತು ಬದಲಾಗಿ MSP ಖಾತರಿ ಕಾನೂನಿಗಾಗಿ ನಡೆಯುತ್ತಿರುವ ಈ ಆಂದೋಲನವನ್ನು ಬಲಪಡಿಸಲು ನೀವೆಲ್ಲರೂ ಹಗಲು ರಾತ್ರಿ ಕೆಲಸ ಮಾಡಬೇಕು” ಎಂದು ಹೇಳಿದರು.
ಫೆಬ್ರವರಿ 14 ಮತ್ತು 22 ರಂದು ಕೇಂದ್ರ ಸರ್ಕಾರದ ಸಚಿವರೊಂದಿಗೆ ನಡೆದ ಕಳೆದ ಎರಡು ಸಭೆಗಳಲ್ಲಿ, ನಮ್ಮ ನಿಯೋಗವು MSP ಖಾತರಿ ಕಾನೂನನ್ನು ಬಲವಾಗಿ ಒತ್ತಾಯಿಸಿತು ಮತ್ತು MSP ಖಾತರಿ ಕಾನೂನನ್ನು ಬೆಂಬಲಿಸುವ ಬಲವಾದ ಸಂಗತಿಗಳನ್ನು ಮಂಡಿಸಿತು ಎಂದು ರೈತ ಮುಖಂಡರು ಹೇಳಿದರು.
ಕೇಂದ್ರ ಸರ್ಕಾರದ ಸಚಿವರು ಮತ್ತು SKM (ರಾಜಕೀಯೇತರ) ಮತ್ತು KMM ನ ರೈತ ನಿಯೋಗದ ನಡುವಿನ ಮುಂದಿನ ಸುತ್ತಿನ ಸಭೆ ಮಾರ್ಚ್ 19 ರಂದು ಚಂಡೀಗಢದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಇನ್ನು ಬೆಂಗಳೂರಿನ ಗಾಂಧಿ ಭವನಕ್ಕೆ ಬಂದಿದ್ದ ಹಲವಾರು ಜಿಲ್ಲೆಯ ರೈತ ಮುಖಂಡರ ಕೋರಿಕೆಯ ಮೇರೆಗೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ಮೂಲಕ ಕರೆತಂದು ರೈತ ಮುಖಂಡರನ್ನು ಭೇಟಿ ಮಾಡಿಸಿ ಅವರ ಆರೋಗ್ಯದ ಬಗ್ಗೆ ತಿಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮುಖಂಡರಾದ ಅಭಿಮನ್ಯು ಕೋಹರ್, ಲಕ್ವಿಂದರ್ ಸಿಂಗ್,ಕಾಕಾಸಿಂಗ್, ಕೊತ್ವಾ ಸುಖಜಿತ್ ಸಿಂಗ್, ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್,ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಕೋ ಪಾಟೀಲ್, ರಾಜ್ಯ ಹಸಿರು ಸೇನೆ ಅಧ್ಯಕ್ಷ ಕರಬಸಪ್ಪಗೌಡ, ಧಾರವಾಡ ಮಹೇಶ್ ಬೆಳಗಾಂವ್ಕರ್, ಗುಲ್ಬರ್ಗ ರಮೇಶ್ ಹೂಗಾರ್, ಚಿಕ್ಕಬಳ್ಳಾಪುರ ಶ್ರೀನಿವಾಸಲು, ಬಳ್ಳಾರಿ ಜಿ.ವಿ.ಲಕ್ಷ್ಮೀದೇವಿ, ಹಾಸನ ಧರ್ಮದಾಜ್, ದಾವಣಗೆರೆ ಅಂಜನಪ್ಪ ಪೂಜಾರ್, ರಾಯಚೂರು ಶಿವಾರ್ಜುನ ನಾಯಕ್, ಯಾದಗಿರಿ ನರಸರೆಡ್ಡಿ ಪೊಲೀಸ್ ಪಾಟೀಲ್, ಚಾಮರಾಜನಗರ ಮೂಕಹಳ್ಳಿ ಮಹದೇವಸ್ವಾಮಿ, ಮೈಸೂರು ಅತ್ತಹಳ್ಳಿ ದೇವರಾಜ್, ತುಮಕೂರು ಜಿಲ್ಲೆಯ ಶಿವಕುಮಾರ್, ಶಾಂತಕುಮಾರಿ ನೆಲಮಂಗಲ, ಬರಡಾನಪುರ ನಾಗರಾಜ್ ಭಾಗವಹಿಸಿದ್ದರು.