ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ತೀರ್ಪು ಖಂಡಿಸಿ ಹೋರಾಟ ಮುಂದುವರಿದಿದ್ದು, ಸಮಸ್ಯೆ ಬಗೆಹರಿಯುವ ತನಕ ಪ್ರತಿನಿತ್ಯ ಮೌನ ಧರಣಿ ಮುಂದುವರಿಸಲು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹಾಗೂ ರೈತ ಮುಖಂಡ ಕುರುಬೂರು ಚಂದ್ರಶೇಖರ್ ಅವರ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ತೀರ್ಮಾನಿಸಿದೆ.
ಗಾಂಧಿ ಜಯಂತಿಯ ಅಂಗವಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ನಡೆದ ಮೌನ ಧರಣಿ ಬಳಿಕ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸಂಘಟನೆಗಳು ಸರದಿಯಂತೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ‘ಕಾವೇರಿ ನಮ್ಮದು’ ಧರಣಿ ಸತ್ಯಾಗ್ರಹ ನಡೆಸಲಿವೆ.
ಶಿಸ್ತುಬದ್ಧ ಹೋರಾಟದ ದೃಷ್ಟಿಯಿಂದ ನಾಲ್ವರನ್ನು, ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ಹೋರಾಟಗಾರರಾದ ಗುರುದೇವ್ ನಾರಾಯಣ್, ಹತ್ತಳ್ಳಿ ದೇವರಾಜ್, ಕೆ.ಕೆ.ಮೋಹನ್ ಅವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.
ಧರಣಿ ವಿವರ: ಅಕ್ಟೋಬರ್ 3: ಕನ್ನಡ ಚಳುವಳಿ ಕೇಂದ್ರ ಸಮಿತಿ ಗುರುದೇವ್ ನಾರಾಯಣ್ ನೇತೃತ್ವದಲ್ಲಿ ಧರಣಿ. ಅಕ್ಟೋಬರ್ 4: ಅಮ್ ಆದ್ಮಿ ಪಕ್ಷದ ವತಿಯಿಂದ ಚಳವಳಿ. ಅಕ್ಟೋಬರ್ 5: ಜಯ ಕರ್ನಾಟಕ ಜನಪರ ವೇದಿಕೆ ಜೈ ಶ್ರೀನಿವಾಸ್ ನೇತೃತ್ವದಲ್ಲಿ ಹೋರಾಟ.
ಅಕ್ಟೋಬರ್ 6: ಕನ್ನಡ ಪಕ್ಷದ ಪುರುಷೋತ್ತಮ್ ನೇತೃತ್ವ ಕಾರ್ಯಕರ್ತರಿಂದ ಪ್ರತಿಭಟನೆ. ಅಕ್ಟೋಬರ್ 8: ರಾಜ್ಯ ಕಬ್ಬು ಬೆಳೆಗಾರ ಸಂಘ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಸತ್ಯಾಗ್ರಹ ನಡೆಯಲಿದೆ.
ಸೋಮವಾರದ ಮೌನ ಧರಣಿ: ಇನ್ನು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಸಂಚಾಲಕರಾದ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು, ಗುರುದೇವ್ ನಾರಾಯಣ ಕುಮಾರ್, ವೆಂಕಟಸ್ವಾಮಿ, ಸಾಹಿತಿ ತಲಕಾಡು ಚಿಕ್ಕರಂಗೇಗೌಡ, ಪೃಥ್ವಿರೆಡ್ಡಿ, ಮೋಹನ್ ದಾಸರಿ, ಕೆ.ಕೆ. ಮೋಹನ್, ವಿಜಯ್ ಸಿಂಗ್, ಜ್ಞಾನ್ ಮಧು, ಪುರುಷೋತ್ತಮ್, ರಾಜಪ್ಪ, ಕುಮಾರಸ್ವಾಮಿ ಇತರರು ನೂರಾರು ಹೋರಾಟಗಾರರೊಂದಿಗೆ ಮೌನ ಧರಣಿ ಯಶಸ್ವಿಯಾಗಿ ನಡೆಯಿತು.
ಬಳಿಕ ರಾಗಿ ಮುದ್ದೆ ಕಾಳು ಸಾರು ಊಟ ಮಾಡಲಾಯಿತು. ಧರಣಿ ನಂತರ ಸಭೆ ನಡೆಸಿ ಕಾವೇರಿ ನದಿ ನೀರಿನ ಅವೈಜ್ಞಾನಿಕ ತೀರ್ಪು ವಿರೋಧಿಸಿ ಹಾಗೂ ಸರ್ಕಾರ ಕೂಡಲೇ ತಮಿಳುನಾಡಿಗೆ ಹರಿಯುವ ನೀರು ನಿಲ್ಲಿಸುವ ತನಕ ಫ್ರೀಡಂ ಪಾರ್ಕ್ ನಲ್ಲಿ ನಿರಂತರವಾಗಿ ಧರಣಿ ಸತ್ಯಾಗ್ರಹ ಮುಂದುವರಿಸಲು ತೀರ್ಮಾನ ಕೈಗೊಳ್ಳಲಾಯಿತು.