ಮೈಸೂರು: ಪ್ರತಿವರ್ಷದಂತೆ ಈ ಬಾರಿಯ ದಸರಾ ಮಹೋತ್ಸವದ ಪ್ರಯುಕ್ತ ನಗರದ 11 ಸ್ಥಳಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಸರಾ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅ.15 ರಿಂದ 23ರವರೆಗೆ ಅರಮನೆ ಮುಂಭಾಗದ ವೇದಿಕೆ ಸೇರಿದಂತೆ ನಗರದ ವಿವಿಧೆಡೆ ಒಟ್ಟು 11 ವೇದಿಕೆಗಳಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದ್ದಾರೆ.
ಅರಮನೆ ಮಂಡಳಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.15ರಂದು ಸಂಜೆ 6 ಗಂಟೆಗೆ ಅರಮನೆ ಮುಂಭಾಗದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸವಾರಂಭ ನಡೆಯಲಿದೆ ಎಂದರು.
ಅರಮನೆ ವೇದಿಕೆ ಕಾರ್ಯಕ್ರಮದ ಕಲಾವಿದರನ್ನು ಆಯ್ಕೆ ಮಾಡಲಿದ್ದು, ಈ ಬಾರಿ ಸಾಕಷ್ಟು ಅರ್ಜಿಗಳು ಬಂದಿರುವ ಕಾರಣ ಉತ್ತಮ ತಂಡಗಳನ್ನು ಆಯ್ಕೆ ಮಾಡಿ ಎರಡು ದಿನಗಳಲ್ಲಿ ಉಳಿದ ವೇದಿಕೆ ಕಾರ್ಯಕ್ರಮಗಳ ಕಲಾವಿದರ ಆಯ್ಕೆ ನಡೆಯಲಿದೆ. ನಾಟಕಕ್ಕೆ 468, ಸಂಗೀತ-920, ಜನಪದ-340, ನೃತ್ಯ-692, ಹರಿಕಥೆ-18, ಸೋಬಾನೆಪದ-37, ವಾದ್ಯಸಂಗೀತ-265, ತೊಗಲುಗೊಂಬೆ-10, ಜಾದೂ-5, ನಿರೂಪಣೆ-48 ಸೇರಿ ಒಟ್ಟು 2803 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ನವರಾತ್ರಿಯ ಒಟ್ಟು 9 ದಿನ ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ನಾದಬ್ರಹ್ಮಸಂಗೀತ ಸಭಾ, ಚಿಕ್ಕಗಡಿಯಾರ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ನೃತ್ಯರೂಪಕ, ಭರತನಾಟ್ಯ, ಸುಗಮ ಸಂಗೀತ, ನಾದಸ್ವರ, ಸ್ಯಾಕ್ಸೋಫೋನ್, ವೀಣಾವಾದನ, ಸೋಬಾನೆ ಪದ, ಭಕ್ತಿಗೀತೆ, ಸಾಂಪ್ರದಾಯಿಕ ಗೀತೆ, ತತ್ತತ್ವಪದ, ಹರಿಕಥೆ, ಜನಪದ ಗಾಯನ, ವಾದ್ಯ, ಸೂತ್ರ ಸಲಾಕೆ ಗೊಂಬೆಯಾಟ, ಯಕ್ಷಗಾನ, ಗೊಂದಳಿ ಪದ, ಡೊಳ್ಳಿನ ಹಾಡು, ಕೋಲಾಟ, ಜಡೆ ಕೋಲಾಟ, ಚಿಟ್ಟಿಮೇಳ, ಕೊಡಗಿನ ಸುಗ್ಗಿ ಕುಣಿತ ಹಾಗೂ ಇತರೆ ಕಾರ್ಯಕ್ರಮಗಳು ಜರುಗಲಿವೆ. ಒಟ್ಟು 252 ಕಲಾತಂಡಗಳ 4000ಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶ ದೊರೆಯಲಿದೆ.
ಪುರಭವನ, ಕಿರುರಂಗಮಂದಿರ, ನಟನ ರಂಗಮಂದಿರ, ರಮಾಗೋವಿಂದ ರಂಗಮಂದಿರದಲ್ಲಿ ಅ.15ರಿಂದ 23ರವರೆಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ರಂಗಗೀತೆಗಳ ಕಾರ್ಯಕ್ರಮಗಳು, ಆಧುನಿಕ ನಾಟಕಗಳು, ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರುಗಳಿಂದ ನಾಟಕ ಪ್ರದರ್ಶನವಿದೆ.
ಅ.21 ರಂದು ಸೂಯೋದಯದಿಂದ ಸೂರ್ಯಾಸ್ತದವರೆಗೆ (ಬೆ.6. ರಿಂದ ಸಂಜೆ 6 ಗಂಟೆವರೆಗೆ) ಅರಮನೆ ವೇದಿಕೆಯಲ್ಲಿ ನಾದಸ್ವರ ಕಾಯಕ್ರಮದಿಂದ ಆರಂಭವಾಗಿ ಸ್ಯಾಕ್ಸೊಫೋನ್ ವಾದನ, ವಯೋಲಿನ್ ವಾದನ, ಒಡೆಯರ್ ಕೃತಿಗಳ ಕುರಿತ ನೃತ್ಯರೂಪಕ, ಭರತನಾಟ್ಯ, ಗಾನ ಲಹರಿ ಹಾಗೂ ನಾದ ಲಹರಿ ಸಂಗೀತ ಕಾರ್ಯಕ್ರಮಗಳು, ರಂಗಗೀತೆಗಳು, ಜನಪದ ಗಾಯನ, ಸುಗಮ ಸಂಗೀತ, ವಾದ್ಯ ಸಂಗೀತ ಸೇರಿದಂತೆ ಹಲವಾರು ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ.15 ರಿಂದ 23ರವರೆಗೆ ಪ್ರತಿದಿನ ಸಂಜೆ 5ರಿಂದ 9ರವರೆಗೆ ಮೈಸೂರಿನ ವಾದ್ಯಗೋಷ್ಠಿಯೊಂದಿಗೆ ಸಂಚಾರಿ ವಾಹನದಲ್ಲಿ ನಾನಾ ಕಲಾತಂಡಗಳಿಂದ ವಿವಿಧ ಪ್ರದೇಶಗಳಲ್ಲಿ ಸುಗಮ ಸಂಗೀತ ವಾದ್ಯ ಸಂಗೀತ, ಭಕ್ತಿಗೀತೆಗಳು, ಭಾವಗೀತೆಗಳು, ಸಾಂಪ್ರದಾಯಿಕ ಗೀತೆಗಳು ಹಾಗೂ ಇತರೆ ಗಾಯನ ಕಾರ್ಯಕ್ರಮಗಳನ್ನು ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಕನಿಷ್ಟ 30 ನಿಮಿಷ ನಡೆಯಲಿದೆ ಎಂದು ತಿಳಿಸಿದರು.
ಅ.15 ರಂದು ಸಂ.5ರಿಂದ ಯದುಕುಮಾರ್ ತಂಡದಿಂದ ನಾದಸ್ವರ, 5.30ಕ್ಕೆ ರಾಜಪ್ಪ ಮತ್ತು ಮಲ್ಲೇಶ್ ತಂಡದಿಂದ ವೀರಭದ್ರ ಕುಣಿತ, ಸಂ.6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಂಗೀತ ವಿದ್ವಾನ್ ಪ್ರಶಸ್ತಿ ಪದಾನ ಸವಾರಂಭ. ಸಂ.7ಕ್ಕೆ ಚಿತ್ರ ನಟಿ ಭಾವನ ರಾಮಣ್ಣ ತಂಡದಿAದ ನೃತ್ಯ ರೂಪಕ, ಸಂ.8ಕ್ಕೆ ಜೋಗಿ ಖ್ಯಾತಿಯ ಅಜಯ್ ವಾರಿಯರ್-ಸುನಿತಾ ತಂಡದಿಂದ ಸಂಗೀತ ಗಾಯನ.
ಅ.16ರಂದು ಸಂಜೆ 5ಕ್ಕೆ ಪುಟ್ಟಸ್ವಾಮಿ ಮತ್ತು ತಂಡದಿಂದ ನಾದಸ್ವರ, ಸಂ.5.30ಕ್ಕೆ ಮೈಸೂರಿನ ರಮ್ಯ ಹಾಗೂ ಮಂಡ್ಯದ ಸವಿತ ಚೀರು ಕುನ್ನಯ್ಯ ತಂಡದಿಂದ ಮಹಿಳಾ ಡೊಳ್ಳು ಕುಣಿತ. ಸಂ.6ಕ್ಕೆ ವಿದ್ವಾನ್ ಪೂಜೇರ ಅವರಿಂದ ಶಾಸ್ತ್ರೀಯ ವಾದ್ಯ ವೃಂದ ಕಛೇರಿ, ಸಂಜೆ 7ಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಕಲಾವಿದರಾದ ಹರಿ ಮತ್ತು ಚೇತನ ಅವರಿಂದ ಕಥಕ್ ಸಂಭ್ರಮ, ಸಂಜೆ 8ಕ್ಕೆ ಬೆಂಗಳೂರಿನ ಆಯನಾ ಡ್ಯಾನ್ಸ್ ಕಂಪನಿಯಿಂದ ಭಾರತೀಯ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.