
ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಒಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಬಸ್ ಬಳಿಕ ಕಾರು, ಆಟೋ, ಲಾರಿ ಹಾಗೂ ಬೈಕ್ ಡಿಕ್ಕಿ ಹೊಡೆದಿರುವ ಘಟನೆ ಇಂದು ಮುಂಜಾನೆ ಮೈಸೂರು ರಸ್ತೆಯಲ್ಲಿ ಜರುಗಿದೆ.
ಶನಿವಾರ ಮುಂಜಾನೆ (ಮಾ.15) 5ಗಂಟೆ ಸುಮಾರಿಗೆ ನಗರದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಲ್ದಾಣ ಸಮೀಪ ಈ ಅವಘಡ ಸಂಭವಿಸಿದ್ದು, ಅಪಘಾತದಿಂದ ಆಟೋ ಸಂಪೂರ್ಣ ಅಪ್ಪಚ್ಚಿಯಾಗಿದೆ.
ಕ್ಯಾಂಟರ್ ಮೈಸೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಿಂತಿದ್ದ ಕಾರು, ಆಟೋ, ಬೈಕ್‍ಗೆ ಡಿಕ್ಕಿಯಾಗಿದೆ. ಅಲ್ಲದೆ ಡಿಕ್ಕಿ ಹೊಡೆದುಕೊಂಡೆ ಬಂದು ಬಂದಿದ್ದು, ಈ ವೇಳೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಬರುತ್ತಿದ್ದ ಐರಾವತ ಬಸ್‌ಸಹ ಡಿಕ್ಕಿಹೊಡೆದಿದೆ. ಬಳಿಕ ಲಾರಿಯೊಂದಕ್ಕೆ ಗುದ್ದಿ ಕ್ಯಾಂಟರ್ ನಿಂತಿದೆ.
ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಡಿಕ್ಕಿಯ ರಭಸಕ್ಕೆ ಕ್ಯಾಂಟರ್‌ನ ಮುಂಭಾಗ ಜಖಂಗೊಂಡಿದ್ದು, ಗಾಯಗೊಂಡಿದ್ದ ಕ್ಯಾಂಟರ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕ್ಯಾಂಟರ್ ಚಾಲಕ ಕುಡಿದು ವಾಹನ ಚಲಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.