ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದು, ಸರ್ಕಾರದ ಈ ನಿರ್ಧಾರದ ವಿರುದ್ಧ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಹೊತ್ತಿನಲ್ಲೇ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೋಮವಾರ ಮುಖ್ಯಮಂತ್ರಿಗಳ ಬಳಿ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಈ ಬೇಡಿಕೆ ಮತ್ತೊಂದು ಸುತ್ತಿನ ರಾಜಕೀಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಜತೆಗೆ ರಾಜ್ಯದಲ್ಲಿ ಅಣ್ಣ ತಮ್ಮ ಬಂಧುಗಳಂತೆ ಇರುವವರ ಮನಸ್ಸುಗಳನ್ನು ಕದಡುವ ಇಂಥ ಪ್ರಯತ್ನಕ್ಕೆ ಈಗಾಗಲೇ ಹಲವರು ಪರವಿರೋಧ ಸೊಲ್ಲೆತ್ತಿದ್ದಾರೆ.
ಅದೇನಂಪ್ಪ ಅಂದರೆ ಲಕ್ಷ್ಮಣ ಸವದಿ ಫೇಸ್ ಬುಕ್‌ನಲ್ಲಿ, ‘ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ಅಭಿವೃದ್ಧಿ ಮಂಡಳಿ/ ನಿಗಮವನ್ನು ಕೂಡಲೇ ಸ್ಥಾಪಿಸಬೇಕೆಂದು’ ಮುಖ್ಯಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ರೀತಿಯ ಬೇಡಿಕೆ ಇಟ್ಟಿದ್ದು ಈಗ ರಾಜಕೀಯ ಮತ್ತು ಧರ್ಮ ಮತ್ತು ವಿವಿಧ ಜಾತಿಗಳ ಸಮುದಾಯಗಳ ನಡುವೆ ತೀರ್ವ ಚರ್ಚೆಯಾಗುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಸಂಸದರಾಗಿದ್ದ ಬಿಜೆಪಿ ನಾಯಕ ಸುರೇಶ್ ಅಂಗಡಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದರಿಂದ ಉಪ ಚುನಾವಣೆ ಎದುರಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈಗ ಲಿಂಗಾಯತ ಸಮುದಾಯದವರು ಸಹ ಪ್ರಾಧಿಕಾರ/ನಿಮಮ ರಚನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ’ ರಚನೆ ಮಾಡಲು ಸರ್ಕಾರ ತೀರ್ಮಾನ ಮಾಡಿದಾಗಲೇ ವೀರಶೈವ ಲಿಂಗಾಯಿತ ಅಭಿವೃದ್ಧಿ ಮಂಡಳಿ/ ನಿಗಮವನ್ನು ಸ್ಥಾಪನೆ ಮಾಡಬೇಕು ಎಂಬ ಚರ್ಚೆಗಳು ಆರಂಭವಾಗಿದ್ದವು. ಈಗ ಲಕ್ಷ್ಮಣ ಸವದಿ ಅವರೇ ನಿಗಮವನ್ನು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.