ನ್ಯೂಡೆಲ್ಲಿ: ನಿವೃತ್ತ ನೌಕರರ ವಿವಿಧ ಬೇಡಿಕೆಗಳು ಈಡೇರುವವರೆಗೂ ಅಮರಣಾಂತ ಉಪವಾಸ ಅಂತ್ಯಗೊಳ್ಳುವುದಿಲ್ಲ ಎಂದು ಎನ್‌ಎಸಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯ ಐತಿಹಾಸಿಕ ಜಂತರ್ ಮಂತರ್‌ನಲ್ಲಿ ಇಪಿಎಸ್ ನಿವೃತ್ತ ನೌಕರರ ಉಪವಾಸ ಸತ್ಯಾಗ್ರಹ ಎನ್‌ಎಸಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ ಡಿ.8 ರಿಂದ ಡಿ.24ರವರೆಗೂ ಹಮ್ಮಿಕೊಂಡಿದ್ದು, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ನಿವೃತ್ತ ನೌಕರರು ಶುಕ್ರವಾರ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಈ ಡಿ.10 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಅಶೋಕ್ ರಾವತ್, ವೀರೇಂದ್ರ ಸಿಂಗ್ ರಾಜಾವತ್ ಹಾಗೂ ಎನ್.ಕೆ. ಪಾಟೀಲ್ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ನಿವೃತ್ತರು ಕೈಗೊಳ್ಳಲಾಗುವುದು. ಇದು ನಮ್ಮ ವಿವಿಧ ಬೇಡಿಕೆಗಳು ಈಡೇರುವವರೆಗೂ ಅಮರಣಾಂತ ಉಪವಾಸ ಅಂತ್ಯಗೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ಡಿಸೆಂಬರ್ 7ರಿಂದ ಮುಂದುವರಿದಂತೆ, ದೆಹಲಿಯ ರಾಮಲೀಲಾ ಮೈದಾನ ಹಾಗೂ ಜಂತರ್ ಮಂತರ್‌ನಲ್ಲಿ ನಿವೃತ್ತರ ಕನಿಷ್ಠ ಪಿಂಚಣಿಗೆ ಆಗ್ರಹಿಸಿ, ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಿನ್ನೆಯಿಂದ ಆರಂಭವಾಗಿದ್ದು, ಇದೊಂದು ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಇದು ತಾರ್ಕಿಕ ಅಂತ್ಯ ಕಾಣಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ದೇಶಾದ್ಯಂತ ಸಾವಿರಾರು ನಿವೃತ್ತರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು, ಡಿಸೆಂಬರ್ 4ರಿಂದ 22ರವರೆಗೆ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಇಪಿಎಸ್ ನಿವೃತ್ತರ ಪ್ರತಿಭಟನೆ ಹಮ್ಮಿಕೊಂಡಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳದೇ ನಾವು ಉಪವಾಸ ಸತ್ಯಾಗ್ರಹ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರಕ್ಕೆ ಇದೊಂದು ಎಚ್ಚರಿಕೆ ಗಂಟೆಯಾಗಲಿದೆ. ಈಗಾಗಲೇ ಕಮಾಂಡರ್ ಅಶೋಕ್ ರಾವುತ್ ಅವರು ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಎಚ್ಚರಿಕೆಯ ಮನವಿ ಪತ್ರ ನೀಡಿದ್ದು, ಈ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸದೆ ಹೋದಲ್ಲಿ ಈ ಉಪವಾಸ ಸತ್ಯಾಗ್ರಹ ಯಾವ ರೂಪ ತಾಳುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಡಿ.8ರಿಂದ ನಡೆಯುತ್ತಿರುವ ನಿವೃತ್ತ ನೌಕರರ ಉಪವಾಸ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ 386 ಮಂದಿ ನಿವೃತ್ತ ನೌಕರರ ಭಾಗವಹಿಸಿದ್ದು, ಅವರಲ್ಲಿ ಎನ್ಎಸಿ ಮುಖಂಡರಾದ ರಮಕಾಂತ್ ನರಗುಂದ, ಜಿಎಸ್ಎಂ ಸ್ವಾಮಿ, ವೀರ ಕುಮಾರ್ ಗಡದ್ ಹಾಗೂ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮುಖಂಡರಾದ ನಂಜುಂಡೇಗೌಡ ಮತ್ತು ಆರ್.ಸುಬ್ಬಣ್ಣ ಹಲವಾರು ಸದಸ್ಯರು ಇದ್ದಾರೆ.