ಶಿವಮೊಗ್ಗ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಕುಟುಂಬಗಳ ಸುಲಲಿತ ಜೀವನಕ್ಕೆ ಸಹಕಾರ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.
ಸಾಗರ ತಾಲೂಕು ಕಾನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 13.90 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಈ ಎಲ್ಲವೂ ಕುಟುಂಬದಲ್ಲಿ ಓರ್ವ ದುಡಿಯುವ ವ್ಯಕ್ತಿ ರೀತಿಯಲ್ಲಿ ಬೆಂಬಲಕ್ಕೆ ನಿಂತಿವೆ ಎಂದರು.
ಮಕ್ಕಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಮ್ಮ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಒದಗಿಸಿದೆ. ಅದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳ ಹಾಜರಾತಿ ಬಗ್ಗೆ ಗಮನ ಹರಿಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು ಎಂದರು.
ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸಗಳಿಗೆ ಚುರುಕು ನೀಡಲಾಗುವುದು. ಸಾರ್ವಜನಿಕರ ಭೇಟಿ ಮಾಡಿ ಕುಂದು ಕೊರತೆ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಪರಿಹಾರದ ಕಡೆ ಗಮನ ಹರಿಸಲಾಗುವುದು ಹಾಗೂ ಅಗತ್ಯವಿರುವ ಶಾಲೆಗಳಿಗೆ ಹೆಚ್ಚು ಅನುದಾನ ಒದಗಿಲಾಗುವುದು ಎಂದರು.
ಈ ಭಾಗದ ಜನರು ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರನ್ನು, ಅವರು ಭೂ ಹಕ್ಕು ಕಾಯ್ದೆಗಾಗಿ ಮಾಡಿದ ಹೋರಾಟವನ್ನು ಸ್ಮರಿಸುತ್ತಾರೆ. ಅವರು ಮಾಡಿದ ಕೆಲಸಗಳು ಜೀವಂತವಾಗಿವೆ. ಅದೇ ನಿಟ್ಟಿನಲ್ಲಿ ನಾವು ಕೂಡ ಜನರು ನೆನೆಯುವ, ಜೀವಂತವಾಗಿರುವ ಕೆಲಸಗಳನ್ನು ಮಾಡಬೇಕು ಎಂದರು.
ಈ ವೇಳೆ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಅನೇಕ ಗಣ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.