ನ್ಯೂಡೆಲ್ಲಿ: ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ರಾಜ್ಯದ ಸಂಸದರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆಯವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಸತ್ ಭವನದಲ್ಲಿ ಇಂದಿನಿಂದ ಆರಂಭವಾಗಿರುವ 18ನೇ ಲೋಕಸಭೆಯ ಮೊದಲ ಅಧಿವೇಶನದ ಶುರುವಿನಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಮೂವರು ನೂತನ ಸಂಸದರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿರುವ ಸೋಮಣ್ಣ ಅವರು, ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮೆಟ್ಟಿಲುಗಳಿಗೆ ನಮಸ್ಕರಿಸಿ ಸಂಸತ್ ಪ್ರವೇಶಿಸಿದರು.
ಎಚ್.ಡಿ.ಕುಮಾರಸ್ವಾಮಿಯವರಿಗೆ (ಮಂಡ್ಯ) ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ, ಪ್ರಹ್ಲಾದ್ ಜೋಶಿಯವರಿಗೆ (ಧಾರವಾಡ) ಕಲ್ಲಿದ್ದಲು ಮತ್ತು ಗಣಿ ಹಾಗೂ ರೈಲ್ವೇ ಇಲಾಖೆಯನ್ನು ವಿ.ಸೋಮಣ್ಣ (ತುಮಕೂರು) ಅವರಿಗೆ ನೀಡಲಾಗಿದೆ. ಶೋಭಾ ಕರಂದ್ಲಾಜೆಯವರು (ಬೆಂಗಳೂರು ಉತ್ತರ) ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
18ನೇ ಲೋಕಸಭೆಯ ಸದಸ್ಯನಾಗಿ, ಮಂಡ್ಯ ಮಹಾಜನತೆಯ ಪ್ರತಿನಿಧಿಯಾಗಿ ಗೌರವಾನ್ವಿತ ಹಂಗಾಮಿ ಸಭಾಧ್ಯಕ್ಷರಾದ ಭರ್ತೃಹರಿ ಮಹತಾಬ್ ಅವರ ಸಮಕ್ಷಮದಲ್ಲಿ ನನ್ನ ಮಾತೃಭಾಷೆಯಾದ ಕನ್ನಡಲ್ಲಿ ಪ್ರಮಾಣ ಸ್ವೀಕರಿಸಿದೆ. ಇದು ನನ್ನ ಬದುಕಿನ ಅವಿಸ್ಮರಣೀಯ, ಹೆಮ್ಮೆಯ ಕ್ಷಣ ಎಂದು ಸಚಿವ ಕುಮಾರಸ್ವಾಮಿ ಎಕ್ಸ್ ಮಾಡಿದ್ದಾರೆ.
ಇನ್ನು ಭಾರತದ ಪ್ರಜಾಪ್ರಭುತ್ವ ದೇಗುಲದಲ್ಲಿ ಈ ಧನ್ಯತೆಯ ಕ್ಷಣಕ್ಕೆ ಕಾರಣೀಭೂತರಾದ ಮಂಡ್ಯ ಲೋಕಸಭೆ ಕ್ಷೇತ್ರದ ಎಲ್ಲಾ ತಂದೆ ತಾಯಂದಿರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಹಾಗೂ ಸಮಸ್ತ ಕನ್ನಡಿಗರಿಗೆ ಅನಂತ ಧನ್ಯವಾದಗಳನ್ನು ಅರ್ಪಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
I took the oath as a member of the 18th Lok Sabha, representing the people of Mandya Maha janate, in the presence of Mr. Bhartruhari Mahtab, the Hon’ble Pro-Tem Speaker of the Lok Sabha, in my mother tongue, Kannada. This is an unforgettable moment in my life.
I extend my… pic.twitter.com/rUu5gRfjaU
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 24, 2024