ಬಾಗಲಕೋಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳ ಸಂಘಟನೆಗಳ ಒಕ್ಕೂಟ ಇದೇ ಏ.8ರಿಂದ ಹಮ್ಮಿಕೊಂಡಿರುವ ಚಿತ್ರದುರ್ಗದಿಂದ- ಬೆಂಗಳೂರು ವರೆಗಿನ ಪಾದಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಬಾಗಲಕೋಟೆ ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಮಹಾ ಮಂಡಳದ ಅಧ್ಯಕ್ಷ ಆರ್.ಪಿ.ಕೊಪರ್ಡೆ ತಿಳಿಸಿದ್ದಾರೆ.

ಶುಕ್ರವಾರ (ನಿನ್ನೆ) ನಡೆದ ಮಹಾ ಮಂಡಳದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು ನಮ್ಮ ಬೆಂಬಲವನ್ನು ಈ ಹೋರಾಟಕ್ಕೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಯ ಒಕ್ಕೂಟದವರು ಇದೇ ಏ.21ರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಸಮಾನ ವೇತನಕ್ಕಾಗಿ ಆಗ್ರಹಿಸಿ ಬೇಡಿಕೆ, ಇಟ್ಟಿದ್ದಾರೆ.
ಅದೇ ರೀತಿ 01-01-2020 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಈ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿಯನ್ನು ಮತ್ತು ಇತರೆ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೇ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಘೋಷಿಸುವಂತೆ ಬೇಡಿಕೆ ಇಟ್ಟಿದ್ದಾರೆ. 2020-21 ರ ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಹೊರಡಿಸಿರುವ ಶಿಕ್ಷಾದೇಶಗಳನ್ನು ರದ್ದು ಪಡಿಸುವಂತೆ ಕೋರಿದ್ದಾರೆ. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರೆ ಕೊಟ್ಟಿರುವ ಉಪವಾಸ ಸತ್ಯಾಗ್ರಹ ಹಾಗೂ ಈ ನಡೆಸುತ್ತಿರುವ ಪಾದಯಾತ್ರೆಗೆ ನಮ್ಮ ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಮಹಾಮಂಡಳವು ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸುತ್ತದೆ ಎಂದು ತಿಳಿಸಿದ್ದಾರೆ.
Related










