ಬೆಂಗಳೂರು: ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಹಳದಿ ಲೋಕದ ದರ ಗಗನಕ್ಕೇರುತ್ತಲೇ ಇದೆ. ಆದರೆ ಇಂದು ಕೊಂಚ ಇಳಿಕೆ ದಾಖಲಾಗಿದ್ದು, ಇಂದು ಚಿನ್ನ ಕೊಳ್ಳುವವರಿಗೆ ಒಳ್ಳೆ ಸಮಯ ಎಂದೇ ಹೇಳಬಹುದಾಗಿದೆ.
ಈ ಹಿಂದೆ 10 ಗ್ರಾಂಗೆ 35 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ ಇಂದು 50 ಸಾವಿರ ರೂಪಾಯಿ ಸಮೀಪಿಸಿದೆ. ಅನ್ಲಾಕ್ ಘೋಷಣೆ ಆದ ನಂತರದಲ್ಲಿ ಚಿನ್ನದ ಆಮದು ಸಮಸ್ಥಿತಿಗೆ ಬರುತ್ತಿದ್ದು, ಚಿನ್ನದ ಬೆಲೆ ನಿಧಾನವಾಗಿ ಕಡಿಮೆ ಆಗಿತ್ತು. ಭಾರತದಲ್ಲಿ ಹಬ್ಬಕ್ಕೆ ಭಾರಿ ಪ್ರಾಮುಖ್ಯತೆ ನೀಡುತ್ತಾರೆ. ಈ ಸಂದರ್ಭದಲ್ಲಿ ಚಿನ್ನದ ಖರೀದಿ ಜೋರಾಗಿರುತ್ತದೆ. ಆದರೆ, ಹಬ್ಬ ಮುಗಿಯುತ್ತಿದ್ದಂತೆ ಈಗ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ.
ಕಳೆದವಾರ ಅಷ್ಟೂ ದಿನ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಈ ಮೂಲಕ ಒಂದೇ ದಿನ 800 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ದರ 10 ಗ್ರಾಂಗೆ 47,100 ರೂಪಾಯಿ ಆಗಿದೆ. ಬೆಳ್ಳಿ ದರದ ವಿಚಾರಕ್ಕೆ ಬರುವುದಾದರೆ ಕಳೆದವಾರ ಕೆಜಿ ಬೆಳ್ಳಿ ದರ ಸತತ ಇಳಿಕೆ ಕಂಡಿದೆ. ಈ ಮೂಲಕ 62, 800 ರೂಪಾಯಿ ಆಗಿದೆ.
ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೊನಾ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.