ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಮೈಕ್ರೊ ಫೈನಾನ್ಸ್ ಸುಗ್ರಿವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.
ಸಾಲಗಾರರ ಮೇಲೆ ದೌರ್ಜನ್ಯ ಎಸಗುತ್ತಿರುವ ಮೈಕ್ರೊ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರಿವಾಜ್ಞೆಗೆ ಬುಧವಾರ ರಾಜ್ಯಪಾಲರು ಕೆಲವು ಸಲಹೆಗಳೊಂದಿಗೆ ಅನುಮೋದನೆ ನೀಡಿದ್ದಾರೆ.
ರಾಜ್ಯ ಸರಕಾರ ಸಲ್ಲಿಸಿದ್ದ ಸುಗ್ರಿವಾಜ್ಞೆಯನ್ನು ವಾಪಸ್ ಕಳುಹಿಸಿದ್ದ ರಾಜ್ಯಪಾಲರಿಗೆ ಸೂಕ್ತ ಸಮಜಾಯಿಷಿ ನೀಡಿ ಮರು ಸಲ್ಲಿಕೆ ಮಾಡಲಾಗಿತ್ತು. ಇದೀಗ ಈ ಸುಗ್ರಿವಾಜ್ಞೆಗೆ ರಾಜ್ಯಪಾಲರು ಅಂಕಿತದೊಂದಿಗೆ ಸುಗ್ರಿವಾಜ್ಞೆ ಜಾರಿಗೆ ಬರುವುದು ದೃಢಪಟ್ಟಿದೆ.
ರಾಜ್ಯಪಾಲರು ಸುಗ್ರಿವಾಜ್ಞೆಯ ನಿಯಮಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿದ ನಂತರ ಜಾರಿಗೆ ತರುವಂತೆ ಸಲಹೆ ನೀಡಿದ್ದಾರೆ. ಸುಗ್ರಿವಾಜ್ಞೆಯಲ್ಲಿನ ಕೆಲವು ನಿಯಮಗಳ ಬಗ್ಗೆ ಗೊಂದಲ ಇದ್ದು, ಸದನದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.