ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಹೆಸರಲ್ಲಿ ಅನೇಕ ಸಂಘಟನೆ ಕಟ್ಟಿಕೊಂಡು ನೌಕರರ ಹಿತ ಕಾಪಾಡುವಲ್ಲಿ ವಿಫಲ ವಾಗಿರುವ ತಮ್ಮಲ್ಲಿ ನೌಕರರ ಸವಿನಯ ಮನವಿ.
ಸಂಘಟನೆಗಳ ನಾಯಕರೇ ನೌಕರರ ನಿತ್ಯದ ಜೀವನವನ್ನು ಒಂದು ಸಾರಿ ತಮ್ಮ ಕಣ್ಣ ಮುಂದೆ ತಂದು ಕೊಳ್ಳಿ… ನಾವು ಮಾಡುವ ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿದೆಯಾ? ಜೀವನ ಸರಿಯಾಗಿ ನಡೆಯುತ್ತಿದೆಯಾ? ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರಾ? ನೌಕರರ ಕೌಟುಂಬಿಕ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆಯಾ?
ತಾವುಗಳು ಹತ್ತಾರು ಸಂಘಟನೆ ಕಟ್ಟಿಕೊಂಡು ತಮ್ಮಗಳಲ್ಲೇ ಪೈಪೋಟಿ ಮಾಡುತ್ತಾ, ತಮ್ಮಗಳ ಸಂಘಟನೆಗಳ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ನೌಕರರ ನೈಜ ಸಮಸ್ಯೆಯನ್ನೇ ಮರೆಯುತ್ತಿದ್ದೀರಾ ಅಲ್ವಾ? ನಿಮಗೆ ಇದೇ ಮುಖ್ಯ ವಾಗಿದೆ. ಓಕೆ ಇದರ ಜತೆಗೆ ನಮ್ಮ ಸಮಸ್ಯೆಗಳತ್ತವು ಗಮನ ನೀಡಬೇಕು ಅಲ್ಲವೇ? ಆದರೆ ಅದಾವುದನ್ನು ಮಾಡದೆ ಯಾಮಾರಿಸಿಕೊಂಡೆ ಬರುತ್ತಿದ್ದೀರಿ ಇದು ನಿಮಗೇ ಸರಿ ಅನಿಸುತ್ತದೆಯೇ ಒಮ್ಮೆ ಯೋಚಿಸಿ.
ಇನ್ನು ಅದೇನೇ ಇರಲಿ ನೌಕರರಾದ ನಾವೆಲ್ಲರೂ ಹೇಳಲು ಹೊರಟಿರುವ ವಿಷಯ, ನಿಮ್ಮ ಸಂಘಟನೆ ಯಾವುದೇ ಆಗಿರಲಿ, ಬಲ ಎಷ್ಟೇ ಇರಲಿ, ಇದೊಂದು ಬಾರಿ ಎಲ್ಲರೂ ಸೋತು ಬಿಡಿ. ನೌಕರರ ಹಿತಕ್ಕಾಗಿ, ನೌಕರರ ಅನುದಿನದ ಬೇಡಿಕೆ ಈಡೇರಿಕೆಗಾಗಿ, ನೌಕರರ ನೊಂದಿರುವ ಮನಸಿಗಾಗಿ.
ನೀವು ಇದೀಗ ಸೋತು ನೌಕರರ ಪರವಾಗಿ ನಿಂತರೆ ಮಾತ್ರ ನಿಮ್ಮ ಸಂಘಟನೆ ನೌಕರರ ಮನಸಲ್ಲಿ ಇರುತ್ತವೆ. ನಿಮ್ಮಗಳ ಅಸ್ತಿತ್ವವೂ ಉಳಿಯುತ್ತದೆ. ಸರ್ಕಾರ ಕೂಡಾ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ.
ಬೇರೆ ಇಲಾಖೆಗಳು, ನಿಗಮಗಳ ವೇತನ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಮತ್ತು ಆಡಳಿತ ಮಂಡಳಿ ಜತೆಗೆ ಮಾತನಾಡಿ, ಸರಿ ಸಮಾನ ವೇತನಕ್ಕಾಗಿ ಸಂಸ್ಥೆಯ ಬಹುತೇಕ ಅಧಿಕಾರಿಗಳು, ನೌಕರರ ಒಲವು ಇರುವಾಗ ಅದರ ಕಡೆಗೆ ತಾವೆಲ್ಲರೂ ಒಟ್ಟಾಗಿ ಒಪ್ಪಿ ಸರ್ಕಾರಕ್ಕೆ ಒತ್ತಾಯ ಮಾಡಿ.
ಅಕಸ್ಮಾತ್ ನಮ್ಮದೇ ನಡೆಯಬೇಕು ಅಗ್ರಿಮೆಂಟ್ ಆಗಲೇಬೇಕು ಅನ್ನೋ ಹಾಗಿದ್ರೆ ಸರಿ ಸಮಾನ ವೇತನಕ್ಕೆ ಸಮಾನ ರೀತಿ ಬರುವ ಅಗ್ರಿಮೆಂಟ್ ಮಾಡಿಸಿ ಕೊಡಿ ನಾಯಕರೇ. ಬಂದಿರುವ ಸುಸಮಯದಲ್ಲಿ ತಮ್ಮಗಳ ಸ್ವಾರ್ಥ ನಿಲುವು ನಿರ್ಧಾರ ಬದಿಗೊತ್ತಿ ಒಗ್ಗಟ್ಟಿನಲ್ಲಿ ನಿಂತರೆ ನಮ್ಮಯ ಎಲ್ಲ ಬೇಡಿಕೆಗಳು ಈಡೇರುತ್ತವೆ.
ಇನ್ನು ಅದನ್ನು ಬಿಟ್ಟು ನೌಕರರ ಹಿತಕಿಂತ ಸ್ವಾರ್ಥ, ಅಸೂಯೆ, ಅಹಂ ಅನ್ನೇ ಮುಖ್ಯ ಮಾಡಿಕೊಂಡು ಆಗುವ ಒಳ್ಳೆಯ ಬೆಳವಣಿಗೆಗೆ ಕಲ್ಲು ಹಾಕಿದಿರೋ ಸಹನೆಯ ಕಟ್ಟೆ ಒಡೆದು ನೌಕರರು ನಿಮ್ಮ ವಿರುದ್ಧ ಯಾವ್ ಮಟ್ಟಕ್ಕದರೂ ಇಳಿಯಬಹುದು. ನಾವೆಲ್ಲರೂ ಅತ್ಯಂತ ವಿನಮ್ರ ವಾಗಿ ಕೇಳೋದು ಇಷ್ಟೇ ಹಿಂದಿನದೆಲ್ಲ ಬಿಟ್ಟು ಸರ್ಕಾರದ ಜತೆಗೆ ಒಗ್ಗಟ್ಟಿನಲ್ಲಿ ತಮ್ಮಗಳ ಅಭಿಪ್ರಾಯ ಮಂಡಿಸಿ, ಈಡೇರಿಸುವಂತೆ ಒತ್ತಾಯಿಸುವುದು ಸೂಕ್ತ ಎಂದು ಸಮಸ್ತ ಅಧಿಕಾರಿಗಳು/ನೌಕರರು ಆಗ್ರಹಿಸಿದ್ದಾರೆ.