ಹನೂರು : ವಿ.ಎಸ್.ದೂಡ್ಡಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸಿಗದ ಸ್ಮಶಾನ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ಹನೂರು: ವಿ.ಎಸ್. ದೂಡ್ಡಿ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಶವ ಸಂಸ್ಕಾರಕ್ಕೆ ಸರ್ಕಾರಿ ಸ್ಥಳ ಇಲ್ಲದೇ ಖಾಸಗಿ ಯವರ ಜಮೀನನ್ನು ಆಶ್ರಯ ಪಡೆಯುವ ಪರಿಸ್ಥಿತಿ ಇದ್ದು, ಸಮಸ್ಯೆ ಬಗೆಹರಿಯುವ ತನಕ ಮುಂಬರುವ ವಿಧಾನ ಸಭಾ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.
ಹೌದು! ಇಲ್ಲಿನ ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆ ಎಂದರೆ ಸ್ಮಶಾನ. ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಶವ ಸಂಸ್ಕಾರಕ್ಕೆ ಖಾಸಗಿಯವರ ಜಮೀನು ಆಶ್ರಯ ಪಡೆಯುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಕ್ಷೇತ್ರದ ಶಾಸಕ ಆರ್ ನರೇಂದ್ರ ಹಾಗೂ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕಳೆದ ಅಕ್ಟೋಬರ್‌ನಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನಿಧನರಾಗಿದ್ದಾಗ ಮೃತ ದೇಹವನ್ನು ಖಾಸಗಿಯವರ ಜಮೀನಿನಲ್ಲಿ ಮಾಲೀಕರ ಸಮ್ಮತಿ ಪಡೆದು ಬಳಿಕ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲೂ ಸಹ ವರದಿ ಮಾಡಲಾಗಿತ್ತು. ವರದಿಯನ್ನು ಗಮನಿಸಿ ಜಿಲ್ಲಾಧಿಕಾರಿಗಳು ವಿ.ಎಸ್. ದೊಡ್ಡಿ ಗ್ರಾಮದಲ್ಲಿರುವ ಸರ್ವೇ ನಂ. 16/ಬಿ3 ರಲ್ಲಿ ಲಭ್ಯವಿರುವ 70 ಸೆಂಟ್ ಜಮೀನಿನಲ್ಲಿ 50 ಸೆಂಟ್ ಜಮೀನನನ್ನು ಸ್ಮಶಾನಕ್ಕೆ ಗುರುತಿಸಿ ಮಂಜೂರು ಮಾಡಲಾಗಿದೆ.
ಆದರೆ ಜಿಲ್ಲಾಧಿಕಾರಿಗಳು ಮಾಡಿರುವ ಮಂಜೂರಾತಿ ಸ್ಥಳವನ್ನು ಕಾಟಾಚಾರಕ್ಕೆ ಎಂಬಂತೆ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿ ಹೋದರೆ ವಿನಃ ಅದನ್ನು ಹಸ್ತಾಂತರ ಮಾಡಿಲ್ಲ.
ಗುರುವಾರ ಗ್ರಾಮದಲ್ಲಿ ಕಮಲಮ್ಮ ಎಂಬುವವರು ಮೃತಪಟ್ಟರು. ಅವರ ಮೃತ ದೇಹವನ್ನು ಎಲ್ಲಿ ಅಂತ್ಯಸಂಸ್ಕಾರ ಮಾಡುವುದು ಎನ್ನುವುದರ ಬಗ್ಗೆ ಗ್ರಾಮಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ 50 ಸೆಂಟ್ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದ ಹನೂರು ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ಬೇಸತ್ತು ಸ್ಮಶಾನದ ಸಮಸ್ಯೆ ಬಗೆಹರಿಯುವ ತನಕ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ವರದಿ : ಅಭಿಲಾಷ್‌ಗೌಡ