Search By Date & Category

NEWSನಮ್ಮಜಿಲ್ಲೆಸಂಸ್ಕೃತಿ

ಮೈಸೂರಿನಲ್ಲಿ ನಾಳೆಯಿಂದ ಹರಿದಾಸ ಸಾಹಿತ್ಯ, ಸಂಗೀತ, ನೃತ್ಯ ಸಂಭ್ರಮ

ಪ್ರಖ್ಯಾತ ಕಲಾವಿದೆ ಡಾ. ತುಳಸೀ ರಾಮಚಂದ್ರ ನೇತೃತ್ವ l ಮಾ. 4 ಮತ್ತು 5 ರಂದು ಆಯೋಜನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಸುವಿಖ್ಯಾತವಾಗಿರುವ ನೃತ್ಯಾಲಯ ಟ್ರಸ್ಟ್ ಪ್ರದರ್ಶಕ ಕಲೆಗಳ ಅಕಾಡೆಮಿಯು `ನಲಿವಿನ ಪಯಣ-44′ ಎಂಬ ಹರಿದಾಸ ಸಾಹಿತ್ಯ, ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಮಾ. 4 ಮತ್ತು 5 ರಂದು ಹಮ್ಮಿಕೊಂಡಿದೆ.

ಮೈಸೂರಿನ ಕುವೆಂಪುನಗರದ ಗಾನಭಾರತಿಯಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮಕ್ಕೆ ಮಾ. ೪ ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಅನನ್ಯ ಕಲ್ಚರಲ್ ಅಕಾಡೆಮಿ ವ್ಯವಸ್ಥಾಪಕ ಟ್ರಸ್ಟಿ ಡಾ.ಆರ್.ವಿ.ರಾಘವೇಂದ್ರ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಸುದರ್ಶನ, ಖ್ಯಾತ ಕಲಾವಿದೆ ಮತ್ತು ನೃತ್ಯಾಲಯ ಟ್ರಸ್ಟ್ ಮುಖ್ಯಸ್ಥೆ ಡಾ.ತುಳಸೀ ರಾಮಚಂದ್ರ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ನೃತ್ಯಾಲಯದ ಹಿರಿಯ ವಿದ್ಯಾರ್ಥಿಗಳು `ಪುಷ್ಪಾಂಜಲಿ’ ಹಾಗೂ `ಶ್ರೀ ಹರಿಭಜನೆ’ ಕಾರ್ಯಕ್ರಮ ನೀಡಲಿದ್ದಾರೆ.

ಸಂಜೆ6.30ಕ್ಕೆ ನೃತ್ಯಾಲಯ ಟ್ರಸ್ಟ್ ವಿದ್ಯಾರ್ಥಿನಿಯರು ಕೋಲಾಟ- ದಾಸರ ಪದ ಆಧಾರಿತ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಸಂಜೆ 6.45ಕ್ಕೆ ಶಿವಮೊಗ್ಗದ ಸಹಚೇತನಾ ನಾಟ್ಯಾಲಯದ ಗುರು ಸಹನಾ ಪ್ರಭು ಅವರ ಶಿಷ್ಯವೃಂದದಿಂದ ಹರಿದಾಸರ ಕೃತಿಗಳನ್ನಾಧರಿಸಿದ ನರ್ತನ ರೂಪಾಂತರ `ನರ್ತನಾಂಜಲಿ’ ಪ್ರಸ್ತುತಗೊಳ್ಳಲಿದೆ. ಸಂಜೆ 7.30ಕ್ಕೆ ನೃತ್ಯಾಲಯ ಟ್ರಸ್ಟ್ ವಿದ್ಯಾರ್ಥಿನಿಯರಿಂದ ಶ್ರೀ ಶ್ರೀಪಾದರಾಜರ ಸುಳಾದಿ ಆಧಾರಿತ `ಮಾಧುರ್ಯ ಮೋಹನರಂಗ’ ನೃತ್ಯ ಪ್ರದರ್ಶನವಿದೆ.

ಮಾ.5 ರಂದು ಸಂಜೆ 6 ಗಂಟೆಗೆ ಕರ್ನಾಟಕದ ವಿಶೇಷ ನೃತ್ಯ ಪ್ರಕಾರ ಸ್ವರಮಂಥನ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಸಂಜೆ 6.15ಕ್ಕೆ ಪ್ರಸಿದ್ಧ ವಯೋಲಿನ್ ವಿದ್ವಾಂಸರಾದ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ ಅವರಿಂದ `ಯುಗಳ ಪಿಟೀಲು ವಾದನ’ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಅರ್ಜುನ್‌ಕುಮಾರ್(ಮೃದಂಗ), ವಿದ್ವಾನ್ ಗುರು ಪ್ರಸನ್ನ(ಘಟಂ) ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ. ಆಸಕ್ತರು ಆಗಮಿಸಲು ನೃತ್ಯಾಲಯ ಟ್ರಸ್ಟ್ ಕೋರಿದೆ.

Leave a Reply

error: Content is protected !!