ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರನೊಬ್ಬ ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಕೋಪಗೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಮಗನ ಮುಂದೆಯೇ ಬೆಂಕಿ ಹಚ್ಚಿರುವ ಘಟನೆ ಎಚ್.ಡಿ.ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ KSRTC ಘಟಕದಲ್ಲಿ ಮೆಕ್ಯಾನಿಕ್ ಆಗಿರುವ ಮಲ್ಲೇಶ್ ನಾಯ್ಕ್ ಎಂಬಾತನೆ ಪತ್ನಿ ಮಧುರಾ ಅವರನ್ನು ಕೊಲ್ಲಲು ಯತ್ನಿಸಿದವನು. ಆಕೆ ಸುಟ್ಟಗಾಯಗಳಿಂದ ಬಳಲುತ್ತಿದ್ದು ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮಲ್ಲೇಶ್ ನಾಯ್ಕ್ ಕ್ರೌರ್ಯದಿಂದ ಮಧುರಾ ಸಾವು ಬದುಕಿನ ನಡುವಿನ ಹೋರಾಡುತ್ತಿದ್ದಾರೆ. ಮಲ್ಲೇಶ್ ನಾಯ್ಕ್ ಮೂಲತಃ ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಬಿ.ಬಿ.ತಾಂಡದವನು. 8 ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಾ ಅವರನ್ನು ವಿವಾಹವಾಗಿದ್ದ.
ಬಳಿಕ ಆತ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿದ್ದರಿಂದ ಎಚ್.ಡಿ.ಕೋಟೆಯ ಹನುಮಂತನಗರದಲ್ಲಿ ವಾಸವಾಗಿದ್ದಾರೆ.
ಈ ನಡುವೆ ಮಲ್ಲೇಶ್ ನಾಯ್ಕ್ ಆರೇಳು ವರ್ಷಗಳಿಂದಲೂ ಪತ್ನಿಗೆ ವರದಕ್ಷಿಣೆ ಕಿರುಕುಳ ಹಾಗೂ ಆಕೆಯನ್ನು ಅನುಮಾನದಿಂದ ನೋಡುತ್ತಿದ್ದ. ಅಲ್ಲದೇ ಪ್ರತಿ ದಿನ ಕುಡಿದು ಬಂದು ತವರು ಮನೆಯಿಂದ ಸೈಟ್ ಕೊಡಿಸುವಂತೆ ಗಲಾಟೆ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಈ ಎಲ್ಲವನ್ನು ಸಹಿಸಿಕೊಂಡು ಬಾಳುವೆ ಮಾಡುತ್ತಿದ್ದ ಮಧುರಾ ಅವರು ಕೆಲ ದಿನಗಳ ಹಿಂದೆ ಒಂದೆರೆಡು ದಿನಗಳ ಮಟ್ಟಿಗೆ ತವರು ಮನೆಗೆ ಹೋಗಿ ಬರೋಣ ಎಂದು ಹೋದ್ದರು. ಆದರೆ, ಈ ವಿಚಾರವನ್ನೇ ನೆಪಮಾಡಿಕೊಂಡು ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಕೆಎಸ್ಆರ್ಟಿಸಿ ನಿಗಮದಲ್ಲಿ ನೌಕರನಾಗಿರುವ ಈತನಿಗೆ ಇಂಥ ದುರ್ಬುದ್ಧಿ ಏಕೆ ಬಂತೋ ಗೊತ್ತಿಲ್ಲ. ಕುಡಿತದ ಚಟಕ್ಕೆ ದಾಸನಾಗಿ ತನ್ನ ಸಂಸಾರವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿರುವುದು ಸರಿಯಲ್ಲ. ಆಕೆ ತಪ್ಪು ಮಾಡುತ್ತಿದ್ದರೆ ಕುಳಿತು ಬುದ್ಧಿ ಹೇಳಬೇಕಿತ್ತು. ಇಲ್ಲ ಆಕೆ ಬುದ್ದಿ ಮಾತು ಕೇಳಲಿಲ್ಲ ಎಂದಾದರೆ ಕಾನೂನಿನ ಮೊರೆ ಹೋಗಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿದ್ದರೆ ಅದು ತಪ್ಪು ಎಂದು ಸಹೋದ್ಯೋಗಿಗಳು ಹೇಳುತ್ತಿದ್ದಾರೆ.