ಬೆಂಗಳೂರು: ಬಾಲ ನಟರಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಹಾಗೂ ಇತ್ತೀಚೆಗೆ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದ ನಿತಿನ್ ಗೋಪಿ (39) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ದಿವಂಗತ ಡಾ.ವಿಷ್ಣುವರ್ಧನ್ ಅಭಿನಯದ ಹಲೋ ಡ್ಯಾಡಿ ಸಿನಿಮಾದಲ್ಲಿ ಬಾಲ ನಟನಾಗಿ ಪ್ರೇಕ್ಷಕರ ಮನಗೆದಿದ್ದರು. ಕನ್ನಡಿಗರ ಮನೆ ಮಾತಾಗಿದ್ದ ನಟ ಹಾಗೂ ನಿರ್ದೇಶಕ ನಿತಿನ್ ಗೋಪಿ ಬಾಲನಟನಾಗಿಯೇ ಕನ್ನಡ ಸಿನಿಮಾ ಪ್ರಿಯರಿಗೆ ಹೆಚ್ಚು ಪರಿಚಿತರಾಗಿದ್ದರು.
‘ನಿಶಬ್ಧ’, ‘ಕೆರಳಿದ ಕೇಸರಿ’, ‘ಚಿರಬಾಂದವ್ಯ’, ‘ಮುತ್ತಿನಂಥ ಹೆಂಡತಿ’, ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಿತಿನ್ ಬಾಲನಟನಾಗಿ ನಟಿಸಿದ್ದರು. ಇನ್ನು ‘ಹಲೋ ಡ್ಯಾಡಿ’ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಮಗನಾಗಿ ಕಾಣಿಸಿಕೊಂಡಿದ್ದ ನಿತಿನ್, “ಶಾಲೆಗೆ ಈ ದಿನ ರಜಾ” ಹಾಡಿನ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆ.
ಹೃದಯಾಘಾತ: ಇಟ್ಟಮಡುವಿನ ಅಪಾರ್ಟ್‌ಮೆಂಟ್‌ನಲ್ಲಿದ್ದ ನಿತಿನ್ ಅವರಿಗೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ. ಆದರೆ ಮಾರ್ಗ ಮಧ್ಯದಲ್ಲೇ ಅಸುನೀಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇನ್ನು ಮುಂಬೈನಲ್ಲಿ ಚಿತ್ರೀಕರಣಗೊಂಡ ‘ಹರ ಹರ ಮಹದೇವ’ ಧಾರಾವಾಹಿಯ ಹಲವು ಸಂಚಿಕೆಗಳನ್ನು ಹಾಗೂ ತಮಿಳು ಧಾರಾವಾಹಿಯೊಂದನ್ನು ನಿರ್ದೇಶಿಸಿದ್ದಾರೆ. ಬಾಲಾಜಿ ಟೆಲಿಫಿಲ್ಮ್ಸ್ ಹಾಗೂ ಶ್ರುತಿ ನಾಯ್ಡು ಅವರ ಕೆಲ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದು, ಹೊಸ ಧಾರಾವಾಹಿಯೊಂದರ ನಿರ್ದೇಶನಕ್ಕೆ ಸಿದ್ಧತೆ ನಡೆಸಿದ್ದರು.
ಕೇವಲ 39ರ ವಯಸ್ಸಿನ ನಿತಿನ್, ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಅಂದಹಾಗೆ ಇವರು ಖ್ಯಾತ ಕೊಳಲು ವಾದ ಗೋಪಿ ಅವರ ಪುತ್ರ. ನಿತಿನ್ ಅಗಲಿಕೆಗೆ ಕಿರುತೆರೆಯ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕಂಬನಿ ಮಿಡಿಸಿದ್ದಾರೆ.