ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಬ್ಯಾಂಕ್ ಮ್ಯಾನೇಜರ್ ಸೇರಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಶಿಂಷಾ ನದಿ ಬಳಿ ನಡೆದಿದೆ.
ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ನಿವಾಸಿಗಳಾದ ಶಂಕರ್ ಹಾಗೂ ಮಹದೇವು ಎಂಬುವರು ಅಸುನೀಗಿದ್ದಾರೆ. ಮತ್ತೊಬ್ಬರಾದ ಕಿಶೋರ್ ಎಂಬುವರು ತೀವ್ರ ಗಾಯಗೊಂಡಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಈ ಮೂವರು ಬೆಂಗಳೂರಿನ ಐಸಿಐಸಿಐ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ಮೈಸೂರಿಗೆ ಬಂದಿದ್ದ ಇವರು ಬಳಿಕ ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಶಿಂಷಾ ನದಿ ಸೇತುವೆ ಮೇಲೆಯೇ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ಕ್ಯಾಮೆರಾ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೈಸೂರು ಕಡೆಗೆ ಹೋಗುವ ರಸ್ತೆಗೆ ಹೋಗಿ ಕಾರು ಮಗುಚಿ ಬಿದ್ದಿದೆ.
ಡಿಕ್ಕಿಯ ರಭಸಕ್ಕೆ ಮ್ಯಾನೇಜರ್ ಶಂಕರ್ ಹಾಗೂ ಮಹದೇವು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಿಶೋರ್ಗೆ ಗಂಭೀರ ಗಾಯವಾಗಿದ್ದು, ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಸ್ಥಳಕ್ಕೆ ಮದ್ದೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.