ಪಿರಿಯಾಪಟ್ಟಣ : ಶ್ರೀ ಅಂಕನಾಥೇಶ್ವರ ಕುಂಬಾರ ಸಂಘದ ಆಸ್ತಿಯನ್ನು ಪಿಡಿಒ ದೇವರಾಜೇಗೌಡ ಅಕ್ರಮವಾಗಿ ಬೇರೆಯವರಿಗೆ ಖಾತೆ ಮಾಡಿದ್ದಾರೆ ಎಂದು ಆರೋಪಿಸಿ ಕೊಣಸೂರು ಕುಂಬಾರ ಸಮಾಜ ಹಾಗೂ ಭೀಮ್ ಆರ್ಮಿ ಸಂಘದ ವತಿಯಿಂದ ಭುವನಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ತಾಲೂಕಿನ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೊಣಸೂರು ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕುಂಬಾರ ಸಮುದಾಯದವರು ಶ್ರೀಮಣಿಯಮ್ಮ-ಅಂಕನಾಥೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿಕೊಂಡು ಪೂಜೆ ಸಲ್ಲಿಸುತ್ತಾ ಬಂದಿದ್ಧಾರೆ.
ಇದೇ ಜಾಗಕ್ಕೆ ಹೊಂದಿಕೊಂಡಂತೆ ಸರಕಾರ ಸೇರಿದ ಜಾಗವಿದ್ದು ಇದರಲ್ಲಿ ದೇವಾಲಯದ ಭಕ್ತಾದಿಗಳಿಗೆ ಮೂಲಸೌಕರ್ಯಕ್ಕಾಗಿ ಮಹಿಳಾ ಶೌಚಾಲಯ ಸ್ನಾನ ಗೃಹ ಮತ್ತು ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲು ಮೀಸಲಿರಿಸಿಕೊಂಡು ತಂತಿ ಬೇಲಿಹಾಕಿ ಇದೇ ಜಾಗದಲ್ಲಿಯೂ ಅಂಕನಾಥೇಶ್ವರ ದೇವಾಲಯದ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಕ್ಕೆ ಮೀಸಲಿರಿಸಲಾಗಿದೆ.
ಆದರೆ ಕೆಲ ದಿನಗಳ ಹಿಂದೆ ಬೇರೆ ಸಮುದಾಯದ ವ್ಯಕ್ತಿ ರಾಜಕೀಯ ಚಿತಾವಣೆಗಾಗಿ ದೇವಾಲಯಕ್ಕೆ ಹೊಂದಿಕೊಂಡಂತಿರುವ ಹಿಂಭಾಗದ ಜಾಗವನ್ನು ಗುಡಿ ಕೈಗಾರಿಕೆ ಮಾಡಲು ಅಥವಾ ಈ ಜಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಮನವಿ ಮಾಡಿದ್ಧಾರೆ.
ಈ ವಿಚಾರವಾಗಿ ಹಿರಿಯ ಅಧಿಕಾರಿಗಳು ವರದಿ ಕೇಳಿದ ಸಂದರ್ಭದಲ್ಲಿ ಪಿಡಿಒ ದೇವರಾಜೇಗೌಡ ಏಕಪಕ್ಷೀಯ ನಿಧಾರ ತೆಗೆದುಕೊಂಡು ಸರಿಯಾದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡದೆ, ಗ್ರಾಮ ಪಂಚಾಯಿತಿ ಸದಸ್ಯರ ವಿರೋಧದ ನಡುವೆಯೂ ಬೇರೆಯವರಿಗೆ ಸದರಿ ಜಾಗವನ್ನು ಡಿಮ್ಯಾಂಡ್ ಕೂರಿಸಿದ್ಧಾರೆ.
ಈ ಮೂಲಕ ಎರಡು ಸಮುದಾಯಗಳಲ್ಲಿ ದ್ವೇಷ ಭಾವನೆ ಬಿತ್ತುವುದರ ಮೂಲಕ ಅಶಾಂತಿ ಉಂಟುಮಾಡುತ್ತಿದ್ಧಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ಮುಖಂಡ ಕೊಣಸೂರು ಪ್ರಭು ಹೇಳಿದ್ದಾರೆ.
ಒಂದು ಸಮುದಾಯಕ್ಕೆ ಅನ್ಯಾಯ ಎಸಗಿ ಮತ್ತೊಂದು ಸಮುದಾಯಕ್ಕೆ ಅಕ್ರಮವಾಗಿ ಭೂಮಿ ನೀಡಲು ಮುಂದಾಗಿರುವ ಪಿಡಿಒ ಕ್ರಮವನ್ನು ಖಂಡಿಸಿದ್ದು ಶೀಘ್ರದಲ್ಲಿ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಡಿಮ್ಯಾಂಡ್ ರದ್ದು ಮಾಡಿ ಕುಂಬಾರ ಸಮುದಾಯಕ್ಕೆ ನ್ಯಾಯ ದೊರಕಿಸದಿದ್ದರೆ ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಹೋರಾಟ ನಡೆಸಲಾಗುವುದು ಎಂದು ಭೀಮ್ ಆರ್ಮಿ ಮುಖಂಡ ಗಿರೀಶ್ ಎಚ್ಚರಿಕೆ ನೀಡಿದ್ದಾರೆ.
ಮನವಿ ಸಲ್ಲಿಕೆ: ಧರಣಿನಿರತರ ಸ್ಥಳಕ್ಕೆ ಆಗಮಿಸಿದ ಪಿಡಿಒ ದೇವರಾಜೇಗೌಡ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದು ಮನವಿ ಸ್ವೀಕರಿಸಿದ ಪಿಡಿಒ ಮಾತನಾಡಿ ಹಿರಿಯ ಅಧಿಕಾರಿಗಳು ಕೇಳಿದ ವರದಿಯನಷ್ಟೆ ಸಲ್ಲಿಸಿದ್ದೇವೆ. ಆದರೆ ಡಿಮ್ಯಾಂಡ್ ವಜಾ ಮಾಡಲು ಇಒಗೆ ಅಧಿಕಾರ ವಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮವಹಿಸುವುದಾಗಿ ತಿಳಿಸಿದರು.
ಕುಂಬಾರ ಸಂಘದ ಅಧ್ಯಕ್ಷ ಭದ್ರಶೆಟ್ಟಿ, ಉಪಾಧ್ಯಕ್ಷ ರಾಜಶೆಟ್ಟಿ, ಮುಖಂಡರಾದ ಕೆ.ಎಸ್.ಮಹಾದೇವ್, ನಾಗರಾಜ್, ಚಂದ್ರಶೆಟ್ಟಿ, ರಾಜಪ್ಪ, ಮಹೇಶ್, ರವಿ, ಪ್ರದೀಪ್, ಚಂದ್ರು, ಕೆ.ಪಿ.ನಾಗೇಂದ್ರ, ಸೇರಿದಂತೆ ಮತ್ತಿತರರು ಇದ್ದರು.