ಸಾರಿಗೆ ನೌಕರರಿಗೆ ಅನ್ಯಾಯ: ಸರ್ಕಾರದ ಜತೆ ಕೈ ಜೋಡಿಸಿದ ಆ ಸಂಘಟನೆಗಳು ನಾಚಿಕೆಗೇಡು ಎಂದ ಆರ್. ಎಸ್.ಕುಲಕರ್ಣಿ
ಬಾಗಲಕೋಟೆ: ಸಾರಿಗೆ ನೌಕರರಿಗೆ ವೇತನ ಶ್ರೇಣಿಯ ಪರಿಷ್ಕರಣೆ ಆಗಬೇಕೇ ಹೊರತು ವೇತನ ಪರಿಷ್ಕರಣೆ ಆಗಬಾರದು ಎಂದು ಎಐಟಿಯುಸಿ ಬಾಗಲಕೋಟೆಯ ಮಾಜಿ ಪದಾಧಿಕಾರಿ ಆರ್.ಎಸ್.ಕುಲಕರ್ಣಿ ಹೇಳಿದ್ದಾರೆ.
ಸಾರಿಗೆ ನೌಕರರ ಕೂಟ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬೃಹತ್ ಸೈಕಲ್ ಜಾಥಾವನ್ನು ಬಾಲಗಕೋಟೆಯಲ್ಲಿ ಸ್ವಾಗತಿಸುವ ಮೂಲಕ ಪ್ರೋತ್ಸಾಹ ನೀಡಿದ ಅವರು ಬಳಿಕ ಮಾತನಾಡಿ, ಸರ್ಕಾರ ಕಳೆದ 2016ರ ವರೆಗೂ ಏಕಪಕ್ಷೀಯವಾಗಿ ವೇತನ ಪರಿಷ್ಕರೆಣೆ ಮಾಡಿತು. ಅದನ್ನು ವಿರೋಧಿಸಬೇಕಾದ ಆ ಸಂಘಟನೆಗಳು ಸರ್ಕಾರಕ್ಕೆ ಸಾಥ್ ನಿಡುವ ಮೂಲಕ ನೌಕರರನ್ನು ಬೀದಿ ತಂದು ನಿಲ್ಲಿಸಿವೆ, ಇದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶೇ.5, ಶೇ.6 ಹೀಗೆ ಭಿಕ್ಷೆಯ ರೀತಿಯಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಿವೆ. ಕೈಗಾರಿಕೆ ಒಪ್ಪಂದದ ಮೂಲಕ ದ್ವಿಪಕ್ಷೀಯ ಮಾತುಕತೆ ಮಾಡಬೇಕಿತ್ತು. ಆದರೆ ಅದನ್ನು ಗಾಳಿ ತೂರಿದ ಸರ್ಕಾರಕ್ಕೆ ಆ ಸಂಘಟನೆಗಳು ಸಾಥ್ ನೀಡಿದ್ದರಿಂದ ಇಂದು ನೌಕರರು ಸರ್ಕಾರಿ ನೌಕರರಿಗಿಂತ ಶೇ.40ರಷ್ಟು ವೇತನ ಕಡಿಮೆ ಪಡೆಯುವಂತಾಗಿದೆ ಎಂದು ಕಿಡಿಕಾರಿದರು.
ಇತ್ತ ಸರಿಯಾಗಿ ವೇತನವು ಇಲ್ಲದೆ ಇವರ ಅವೈಜ್ಞಾನಿಕ ನಡೆಯಿಂದ ನೌಕರರು ಸರಿಯಾಗಿ ಕೆಲಸ ಮಾಡಲು ಈಗ ಸಾಧ್ಯವಾಗುತ್ತಿಲ್ಲ, ಆತ್ಮಹತ್ಯೆ, ಕಿರುಕುಳಗಳು ಹೆಚ್ಚಾಗುತ್ತಿವೆ ಇದಕ್ಕೆ ಯಾರು ಕಾರಣ ಎಂದು ಎಲ್ಲರಿಗೂ ತಿಳಿದಿದೆ ಅದನ್ನು ಬಿಡಿಸಿ ಹೇಳಬೇಕಿಲ್ಲ ಎಂದು ಹೇಳಿದರು.
ಇನ್ನು 2000-2004-2008-2012-2016ರಲ್ಲಿ ಏಕ ಪಕ್ಷೀಯ ವೇತನ ಪರಿಷ್ಕರಣೆ ಮಾಡಿದ್ದರಿಂದ ಈ ಸಮಸ್ಯೆಯನ್ನು ನಾವು ಇಂದು ಎದುರಿಸುತ್ತಿದ್ದೇವೆ. ಈ ಹಿಂದೆ ಅಂದರೆ 1992ರಿಂದ 2000ರ ವರೆಗೂ ವೇತನ ಶ್ರೇಣಿ ಪರಿಷ್ಕರಣೆ ಆಗಿದ್ದರಿಂದ ನಾವು ಅಂದು ಸರ್ಕಾರಿ ನೌಕರರಿಗಿಂತಲೂ ಹೆಚ್ಚು ವೇತನ ಪಡೆಯುತ್ತಿದ್ದೇವು.
ಅದರ ನಂತರ ನಮಗೆ ಕೇವಲ ವೇತನವಷ್ಟೇ ಪರಿಷ್ಕರಣೆ (ವೇತನ ಶ್ರೇಣಿಯಲ್ಲ) ಆಗಿದ್ದರಿಂದ ಇಂದು ಈ ಸ್ಥಿತಿ ಬಂದಿದೆ. ಇದಕ್ಕೆ ಸಾಥ್ ನೀಡಿರುವುದು ಆ ಸಂಘಟನೆಗಳು. ಹೀಗಾಗಿ ಇನ್ನು ಮುಂದೆ ಈ ರೀತಿ ವೇತನ ಪರಿಷ್ಕರಣೆ ಆಗಬಾರದು. ವೇತನ ಶ್ರೇಣಿಯಲ್ಲಿ ಪರಿಷ್ಕರಣೆ ಅಗಬೇಕು ಎಂದು ಆಗ್ರಹಿಸಿದರು.