ಮಂಡ್ಯ: ಅನ್ನದಾತರ ವಿರೋಧಿ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಕೊರೊನಾ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಭ್ರಷ್ಟಾಚಾರ ಹಾಗೂ ಕೃಷಿ ಮಸೂದೆ ಕುರಿತಂತೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಜೆಡಿಎಸ್ ಬೆಂಬಲವನ್ನು ಕೋರಲಾಗಿತ್ತು. ಆದರೆ, ಈ ಕುರಿತು ಸಭೆ ನಡೆಸಿದ್ದ ಜೆಡಿಎಸ್ ನಂತರ ಬೆಂಬಲ ನೀಡದಿರಲು ನಿರ್ಧರಿಸಿತ್ತು. ಇದರ ಅರ್ಥವೇನು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಶ್ನಿಸಿದ್ದಾರೆ.
ಮಂಡ್ಯ ಸಕ್ಕರೆ ಕಾರ್ಖಾನೆ ಮುಚ್ಚಲು ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಯ ಖಾಸಗೀಕರಣಗೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಹಿಂದಿನ ಸರ್ಕಾರವೇ ಕಾರಣರಾಗಿದ್ದಾರೆ. ಇದಕ್ಕೆ ಈ ಮಣ್ಣಿನ ಮಕ್ಕಳೇ ಕಾರಣ ಎಂಬುದು ದುರಾದೃಷ್ಟಕರ ವಿಚಾರ. ಕೃಷಿ ಸಮುದಾಯವನ್ನು ನಾಶಪಡಿಸುತ್ತಿರುವ ಬಿಜೆಪಿ ಸರ್ಕಾರವನ್ನು ಜೆಡಿಎಸ್ ಯಾವ ಕಾರಣಕ್ಕೆ ಬೆಂಬಲಿಸುತ್ತಿದೆ ಎಂಬುದೇ ನನಗೆ ಆಶ್ಚರ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ನಾಯಕರು ಯಾವಾಗ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದು ಅವರಿಗೇ ಗೊತ್ತಿರುವುದಿಲ್ಲ. ಇಂಥ ಅತಂತ್ರ ಪಕ್ಷವನ್ನು ಜನರು ಬೆಂಬಲಿಸಬೇಕೆ ಎಂದು ಜೆಡಿಎಸ್ ನಾಯಕರ ಕಾಲೆಳೆದಿದ್ದಾರೆ.